ಬೆಂಗಳೂರು: ಆರು, ಏಳು ಮತ್ತು 8ನೇ ತರಗತಿಗಳು ಇದೇ ಫೆ. 22ರಿಂದ ಪೂರ್ಣ ಪ್ರಮಾಣದಲ್ಲಿ ಆರಂಭವಾಗುತ್ತವೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.
ಮಂಗಳವಾರ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಸಭೆ ನಡೆಸಿದ ನಂತರ ಸಚಿವ ಸುರೇಶ್ ಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದರು.
9ರಿಂದ 12ರವರೆಗಿನ ತರಗತಿಗಳನ್ನು ಪ್ರಾರಂಭ ಮಾಡಲಾಗಿದೆ. ವಿದ್ಯಾಗಮ ಪದ್ಧತಿಯಂತೆ ನಡೆಯುತ್ತಿದ್ದ 6ರಿಂದ 8ರ ವರೆಗಿನ ತರಗತಿಗಳನ್ನು ಫೆ. 22ರಿಂದ ಪೂರ್ಣಪ್ರಮಾಣದಲ್ಲಿ ಪ್ರಾರಂಭಿಸಲಾಗುವುದೆಂದ ಅವರು ಬೆಂಗಳೂರಿನಲ್ಲಿ 8ನೇ ತರಗತಿ ಮಾತ್ರ ಪ್ರಾರಂಭಿಸುತ್ತೇವೆ ಎಂದು ಹೇಳಿದರು.
ಒಂದರಿಂದ ಐದನೇ ತರಗತಿಗಳನ್ನ ಪ್ರಾರಂಭಿಸುವ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಫೆ. 24 ಮತ್ತು 25ರಂದು ಮತ್ತೊಂದು ಸುತ್ತಿನ ಸಭೆ ನಡೆಯಲಿದೆ. ಅಲ್ಲಿ ಐದರವರೆಗಿನ ತರಗತಿಗಳನ್ನು ಆರಂಭಿಸುವುದೋ ಅಥವಾ ವಿದ್ಯಾಗಮದಂತೆ ನಡೆಸುವುದೋ ಎಂಬ ಕುರಿತು ನಿರ್ಧರಿಸಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.
ಫೆ. 22ರಿಂದ 6ರಿಂದ 8ನೇ ತರಗತಿ ಆರಂಭ -ಸಚಿವ ಸುರೇಶ್ ಕುಮಾರ್

