ರಾಜ್ಯದ ಹಲವೆಡೆ ಉದ್ಯಮಿಗಳಿಗೆ ಐಟಿ ಶಾಕ್

ಬೆಂಗಳೂರು: ರಾಜ್ಯದ ಹಲವೆಡೆ ಉದ್ಯಮಿಗಳಿಗೆ ಐಟಿ ಇಲಾಖೆ ಬುಧವಾರ ಶಾಕ್ ನೀಡಿದೆ.
ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಐಟಿ ಇಲಾಖೆ ಅಧಿಕಾರಿಗಳು ಕೆಲ ಮೆಡಿಕಲ್ ಕಾಲೇಜು ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ನಗರದ ಹೆಸರಘಟ್ಟ ರಸ್ತೆಯಲ್ಲಿರುವ ಸಪ್ತಗಿರಿ ಮೆಡಿಕಲ್ ಕಾಲೇಜು, ಕುಂಬಳಗೊಡಿನ ಬಿಜಿಎಸ್ ಶಿಕ್ಷಣ ಸಂಸ್ಥೆ, ದೇವನಹಳ್ಳಿಯ ಆಕಾಶ್ ಮೆಡಿಕಲ್ ಕಾಲೇಜು, ತುಮಕೂರಿನ ಶ್ರೀದೇವಿ ಕಾಲೇಜು, ಮಂಗಳೂರಿನ ಖ್ಯಾತ ಉದ್ಯಮಿ ಬಿ ಆರ್ ಶೆಟ್ಟಿ ಅವರಿಗೆ ಸೇರಿದ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಕಚೇರಿಗಳು, ಕಾಂಗ್ರೆಸ್ ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಒಡೆತನದ ಮೆಡಿಕಲ್ ಕಾಲೇಜುಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಲ್ಲಿ ದಾಖಲೆ, ಕಡತಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಶ್ರೀದೇವಿ ವಿದ್ಯಾಸಂಸ್ಥೆ ಮಾಜಿ ಶಾಸಕ, ಬಿಜೆಪಿ ಮುಖಂಡ ಡಾ ಎಂ ಆರ್ ಹುಲಿನಾಯ್ಕರ್ ಅವರಿಗೆ ಸೇರಿದ್ದಾಗಿದೆ.
ದಾವಣಗೆರೆ ಜೆಜೆಎಂ, ಎಸ್.ಎಸ್. ಮೆಡಿಕಲ್ ಕಾಲೇಜ್ ಹಾಗೂ ಬಾಪೂಜಿ ಡೆಂಟಲ್ ಕಾಲೇಜ್ ಗಳ ಮೇಲೆ ದಾಳಿ ಮಾಡಿದ್ದಾರೆ.
ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜುಗಳಿಂದ ಆದಾಯ ತೆರಿಗೆ ವಿವರ ನೀಡುತ್ತಿಲ್ಲ, ತೆರಿಗೆ ಕಟ್ಟುತ್ತಿಲ್ಲ ಎಂಬ ಆರೋಪ ಸಂಬಂಧ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.