ಮದುವೆ ಸಮಾರಂಭಕ್ಕೆ ಮಾರ್ಷಲ್ ನಿಯೋಜನೆ; ಲಾಕ್ ಡೌನ್ ಹೇರುವ ಪರಿಸ್ಥಿತಿ ತರಬೇಡಿ -ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು: ಮದುವೆ ಸಮಾರಂಭಗಳಲ್ಲಿ ಕೋವಿಡ್ ಸುರಕ್ಷತಾ ಕ್ರಮ ಪಾಲಿಸಲು ಮಾರ್ಷಲ್ ನಿಯೋಜಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಎಲ್ಲ ಜಿಲ್ಲೆಗಳ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
ಮದುವೆ ಸಮಾರಂಭಗಳಲ್ಲಿ ಅಂತರ ಕಾಯ್ದುಕೊಳ್ಳುತ್ತಿಲ್ಲ. ನಾನೇ ಸಮಾರಂಭಕ್ಕೆ ಹೋದರೆ ಮಾಸ್ಕ್ ತೆಗೆಯಿರಿ ಎಂದು ಹೇಳುತ್ತಾರೆ. ಹೀಗಾಗಿ ಮದುವೆ ಸಮಾರಂಭಗಳಲ್ಲಿ ಒಬ್ಬ ಮಾರ್ಷಲ್ ನೇಮಿಸಲು ತೀರ್ಮಾನ ಕೈಗೊಳ್ಳಲಾಗಿದೆ. 500ಕ್ಕಿಂತ ಹೆಚ್ಚು ಜನರಿರಬಾರದು, ಎಲ್ಲರೂ ಮಾಸ್ಕ್ ಧರಿಸುವ ನಿಯಮವನ್ನು ಪಾಲಿಸಲು ಈ ಕ್ರಮ ವಹಿಸಲಾಗುವುದು. ಆಹಾರ ಪೂರೈಕೆ ಮಾಡುವವರಿಗೂ ಪರೀಕ್ಷೆ ಮಾಡಿಸಲು ಸೂಚಿಸಲಾಗಿದೆ ಎಂದರು.
ಕೋವಿಡ್ ಮಾರ್ಗಸೂಚಿಗೆ ವಿರುದ್ಧವಾಗಿ ಸಭೆ, ಸಮಾರಂಭ, ಹೋರಾಟ ನಡೆಯುತ್ತಿದೆ. ಇದನ್ನು ಪಾಲಿಸದೇ ಕೋವಿಡ್ ಸೋಂಕು ಹೆಚ್ಚಾದರೆ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದವರು ಹೇಳಿದರು.
ಮಹಾರಾಷ್ಟ್ರದ ಕೆಲ ಜಿಲ್ಲೆಗಳಲ್ಲಿ ಲಾಕ್ ಡೌನ್ ಆಗಿದ್ದು, ಆ ಪರಿಸ್ಥಿತಿ ರಾಜ್ಯಕ್ಕೆ ಬರಬೇಕೆ ಎಂದು ಆಲೋಚಿಸಬೇಕು ಎಂದು ಕಿವಿಮಾತು ಹೇಳಿದರು.
ಸರ್ಕಾರಿ ಇಲಾಖೆಗಳಲ್ಲಿ 2,90,000 ಮಂದಿ ಇದ್ದು, ಆರೋಗ್ಯ ಇಲಾಖೆಯ 4,24,573 ಮಂದಿಗೆ ಮೊದಲ ಕೋವಿಡ್ ಡೋಸ್ ನೀಡಲಾಗಿದೆ. 1,20,176 ಮುಂಚೂಣಿ ಸಿಬ್ಬಂದಿಗೆ ಲಸಿಕೆ ನೀಡಲಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರು ಎರಡು ಬಾರಿ ನೋಂದಣಿ ಮಾಡಿಸಿಕೊಂಡಿದ್ದು, ಅದನ್ನು ತೆಗೆದುಹಾಕಲಾಗುತ್ತಿದೆ. ಇದರಿಂದಾಗಿ ನಾವು ಮುಟ್ಟಿದ ಗುರಿ ಇನ್ನೂ ಹೆಚ್ಚಾಗಲಿದೆ ಎಂದರು.
ಆರೋಗ್ಯ ಸಿಬ್ಬಂದಿ ಮತ್ತು ಮುಂಚೂಣಿ ಸಿಬ್ಬಂದಿಯಲ್ಲಿ ಶೇ. 80ರಿಂದ ಶೇ. 90 ಮಂದಿಗೆ ಫೆ. 28ರೊಳಗೆ ಲಸಿಕೆ ನೀಡಬೇಕು ಎಂದು ಸೂಚಿಸಲಾಗಿದೆ. ಮುಂಚೂಣಿ ಸಿಬ್ಬಂದಿಗೆ ಫೆ. 22, 23, 24 ಲಸಿಕೆ ಅಭಿಯಾನ ಮಾಡಲಾಗುತ್ತಿದೆ. ಎಲ್ಲ ಅಧಿಕಾರಿಗಳಿಗೆ ಲಸಿಕೆ ಪಡೆಯಲು ತಾಕೀತು ಮಾಡಲಾಗಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಲಸಿಕೆ ಅಭಿಯಾನ ಕುರಿತು ಮಾಹಿತಿ ಪಡೆಯುತ್ತಿದ್ದು, ವಾರದೊಳಗೆ ಈ ಕುರಿತು ಎಲ್ಲ ಅಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಲಿದ್ದಾರೆಂದರು.
ಕೇರಳ, ಮಹಾರಾಷ್ಟ್ರ ಜನರ ಪ್ರಯಾಣಕ್ಕೆ ನಿಬರ್ಂಧ ಹೇರಲಿಲ್ಲ. ಆದರೆ ರಾಜ್ಯದೊಳಗೆ ಬರುವವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯ ಎಮದವರು ತಿಳಿಸಿದರು.
ಶಾಲೆಗಳನ್ನು ಹಂತಹಂತವಾಗಿ ತೆರೆಯುತ್ತಿದ್ದು, ಕೋವಿಡ್ ಸೋಂಕು ಹೆಚ್ಚಳದ ಸಮಸ್ಯೆಯಾಗಿಲ್ಲ.
ಕೋವಿಡ್ 2ನೇ ಅಲೆ ಬಾರದಂತೆ ಕ್ರಮ ವಹಿಸಲಾಗುತ್ತಿದೆ. ಮಾರ್ಚ್ ನಿಂದ ಸಾಮಾನ್ಯ ಜನರಿಗೆ ಲಸಿಕೆ ನೀಡುವ ಬಗ್ಗೆ ಕೇಂದ್ರ ಸರ್ಕಾರ ಶೀಘ್ರವೇ ನಿರ್ಣಯ ಕೈಗೊಳ್ಳಲಿದೆ ಎಮದು ಸಚಿವ ಸುಧಾಕರ್ ಹೇಳಿದರು.