ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜು ಮಾದರಿಯಲ್ಲೇ ಕೃಷಿ ವಿವಿ ಪರಿವರ್ತನೆ ಡಿಸಿಎಂ

ಬೆಂಗಳೂರು: ಪ್ರತಿಷ್ಠಿತ ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜು (ಯುವಿಸಿ) ಮಾದರಿಯಲ್ಲಿಯೇ ಕೃಷಿ ವಿಶ್ವವಿದ್ಯಾಲಯದ ಆಡಳಿತ, ಶೈಕ್ಷಣಿಕ, ಆರ್ಥಿಕ ಸ್ವರೂಪವನ್ನು ಆಮಲಾಗ್ರವಾಗಿ ಬದಲಾವಣೆ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು.
ಬೆಂಗಳೂರಿನಲ್ಲಿ ಶನಿವಾರ  ಹೆಬ್ಬಾಳದ ಪಶುವೈದ್ಯ ಕಾಲೇಜು ಕ್ಯಾಂಪಸ್ಸಿನಲ್ಲಿ ಕೃಷಿ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಸಂಘ ಏರ್ಪಡಿಸಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಶತಮಾನದ ಇತಿಹಾಸವುಳ್ಳ ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜನ್ನು ಅಭಿವೃದ್ಧಿಪಡಿಸುವ ಕೆಲಸವನ್ನು ಸರಕಾರ ಈಗಾಗಲೇ ಕೈಗೆತ್ತಿಕೊಂಡಿದೆ. ಆರ್ಥಿಕ, ಆಡಳಿತ ಮತ್ತು ಶೈಕ್ಷಣಿಕವಾಗಿ ಸ್ವಾಯತ್ತತೆ ನೀಡುವ ಮೂಲಕ ಅದನ್ನು ಜಾಗತಿಕ ಶಿಕ್ಷಣ ಸಂಸ್ಥೆಯನ್ನಾಗಿ ರೂಪಿಸಲಾಗುತ್ತಿದೆ. ಕೃಷಿ ವಿವಿಯನ್ನೂ ಅದೇ ಮಾದರಿಯಲ್ಲಿ ಪರಿವರ್ತನೆ ಮಾಡಲಾಗುವುದು ಎಂದರು.
ಕೃಷಿ ವಿವಿಯಲ್ಲೂ ಬೋರ್ಡ್‌ ಆಫ್‌ ಗವರ್ನೆನ್ಸ್‌ ವ್ಯವಸ್ಥೆಯೇ ಬರಲಿದೆ. ಆಡಳಿತಾತ್ಮಕವಾಗಿ ಸಂಪೂರ್ಣ ಬದಲಾವಣೆ ಇರುತ್ತದೆ. ವಿವಿಗಳಿಗೆ ರಾಜಕೀಯ ನೇಮಕಾತಿಗಳು, ಶಿಷ್ಯಂದಿರನ್ನು ತಂದು ಕೂರಿಸುವುದು, ಸ್ವಹಿತಾಸಕ್ತಿಗಳು ಮುಂತಾದವುಗಳಿಂದ ನಾವು ಹೊರಬರಲೇಬೇಕಿದೆ. ಅತ್ಯುತ್ತಮ ಯಾರಿದ್ದಾರೋ ಅವರಷ್ಟೇ ಇಲ್ಲಿನ ಉನ್ನತ ಸ್ಥಾನಗಳಲ್ಲಿ ಇರಬೇಕು. ಇದೇ ಮಾರ್ಗಸೂಚಿಯನ್ನು ಪ್ರತೀ ಕಾಲೇಜಿಗೂ ಅನ್ವಯ ಮಾಡುತ್ತಿದ್ದೇವೆ ಎಂದು ಡಿಸಿಎಂ ತಿಳಿಸಿದರು.
ಸದ್ಯ ಒಂದು ಎಂಜಿನಿಯರಿಂಗ್‌ ಕಾಲೇಜ್‌ ನಡೆಸಲು ವರ್ಷಕ್ಕೆ 30 ಕೋಟಿ ರೂ, ವೆಚ್ಚ ಮಾಡಲಾಗುತ್ತಿದೆ. ಒಂದು ಐಐಟಿಗೆ 1,200 ಕೋಟಿ ಖರ್ಚು ಮಾಡಲಾಗುತ್ತಿದೆ. ಗುಣಮಟ್ಟದ ಬೋಧನೆ, ಕಲಿಕೆ ಜತೆಗೆ ಜಾಗತಿಕ ಮಟ್ಟದ ಸೌಲಭ್ಯಗಳು ಇರಬೇಕು ಎನ್ನುವ ಕಾರಣಕ್ಕೆ ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜನ್ನು ಅಭಿವೃದ್ಧಿ ಮಾಡಿ ವಾರ್ಷಿಕ 150 ಕೋಟಿ ರೂ. ವೆಚ್ಚ ಮಾಡಲು ಉದ್ದೇಶಿಸಲಾಗಿದೆ. ಸರಕಾರ ಅನುದಾನ ನೀಡುವುದರ ಜತೆಗೆ, ದಾನಿಗಳು, ವಿದ್ಯಾರ್ಥಿಗಳ ಶುಲ್ಕ  ಮತ್ತು ಹಳೆಯ ವಿದಾರ್ಥಿಗಳಿಂದ ನೆರವು ಪಡೆಯಲು ಅವಕಾಶ ನೀಡಲಾಗುತ್ತಿದೆ. ಆ ನಿಟ್ಟಿನಲ್ಲಿ ಕಾಲೇಜಿಗೆ ಆರ್ಥಿಕ, ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಸ್ವಾಯತ್ತತೆ ನೀಡಲಾಗುತ್ತಿದೆ. ಅಲ್ಲಿ ಪ್ರತ್ಯೇಕ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬರುತ್ತದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.