ಬೆಂಗಳೂರು: ಕರ್ನಾಟಕ ರಾಜ್ಯದ ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ (ಇ.ಆರ್.&ಡಿ) ನೀತಿ-2021 ಯನ್ನು ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ, ವಿಜ್ಞಾನ-ತಂತ್ರಜ್ಞಾನ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಂಗಳವಾರ ಅನಾವರಣಗೊಳಿಸಿದರು.
ರಾಜ್ಯದ ಪ್ರಗತಿಗೆ ಹೊಸ ದಿಕ್ಕು ತೋರುವ ಈ ನೀತಿಯನ್ನು ಇಡೀ ಭಾರತದಲ್ಲಿಯೇ ಕರ್ನಾಟಕ ರಾಜ್ಯವು ಮೊತ್ತ ಮೊದಲ ಬಾರಿಗೆ ರೂಪಿಸಿ ಅಳವಡಿಸಿಕೊಳ್ಳುತ್ತಿದೆ ಎಂದು ನೀತಿಯನ್ನು ಅನಾವರಣಗೊಳಿಸಿದ ನಂತರ ಉಪ ಮುಖ್ಯಮಂತ್ರಿಗಳು ಹೇಳಿದರು.
ನಮ್ಮ ದೇಶದಲ್ಲಿ ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ವಲಯವು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು 2018ರಿಂದ ವಾರ್ಷಿಕವಾಗಿ ಸರಾಸರಿ 12.8% ಬೆಳವಣಿಗೆ ಸಾಧಿಸುತ್ತಿದೆ. ಇದೇ ವೇಳೆ ಈ ವಲಯದ ಮೇಲಿನ ಜಾಗತಿಕ ವೆಚ್ಚವು 2025ರ ಹೊತ್ತಿಗೆ 2 ಟ್ರಿಲಿಯನ್ ಡಾಲರ್‌ಗಳಷ್ಟಾಗುವ ಅಂದಾಜಿದ್ದು, ಈ ವಹಿವಾಟು ಅವಕಾಶಗಳಿಗೆ ಅನುಗುಣವಾಗಿ ರಾಜ್ಯವನ್ನು ಸಜ್ಜುಗೊಳಿಸುವ ಉದ್ದೇಶವನ್ನು ಈ ಕಾರ್ಯನೀತಿ ಹೊಂದಿದೆ ಎಂದು ಅವರು ಹೇಳಿದರು.
ಎಲೆಕ್ಟ್ರಾನಿಕ್ಸ್, ಐಟಿ/ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ತಂತ್ರಜ್ಞಾನ ಮತ್ತು ನಾವೀನ್ಯತಾ ಸಂಸ್ಥೆ (ಕಿಟ್ಸ್), ನ್ಯಾಸ್‌ಕಾಂನ ಉದ್ಯಮ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ ರೂಪಿಸಿರುವ ಕಾರ್ಯನೀತಿ ಇದಾಗಿದೆ ಎಂದ ಡಿಸಿಎಂ ಇದರ ವ್ಯಾಪ್ತಿಯಲ್ಲಿ ಅನೇಕ ವಲಯಗಳನ್ನು ಸೇರಿಸಿಕೊಂಡು ಮುನ್ನಡೆಯಲಾಗುವುದು ಎಂದರು.
*ವೈಮಾಂತರಿಕ್ಷ ಮತ್ತು ರಕ್ಷಣೆ
*ವಾಹನ-ವಾಹನ ಬಿಡಿಭಾಗಗಳು-ವಿದ್ಯುತ್ ಚಾಲಿತ ವಾಹನಗಳು
*ಜೈವಿಕ ತಂತ್ರಜ್ಞಾನ, ಔಷಧ ಮತ್ತು ವೈದ್ಯಕೀಯ ಉಪಕರಣಗಳು/ಸಾಧನಗಳು
*ಅರೆವಾಹಕಗಳು, ದೂರಸಂಪರ್ಕ, ಎಲೆಕ್ಟ್ರಾನಿಕ್ ವ್ಯವಸ್ಥೆ ಮತ್ತು ಅಭಿವೃದ್ಧಿ ನಿರ್ವಹಣೆ (ಇ.ಎಸ್.ಡಿ.ಎಂ.)
*ಸಾಫ್ಟ್‌ವೇರ್ ಉತ್ಪನಗಳು
ಇವು ಈ ಕಾರ್ಯನೀತಿಯ ಐದು ಆದ್ಯತಾ ವಲಯಗಳಾಗಿವೆ. ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ ಅನುಷ್ಟಾನದ ನಂತರ ಮೇಲಿನ ಎಲ್ಲ ಕ್ಷೇತ್ರಗಳಲ್ಲಿ ಅಚ್ಚರಿಯ ಫಲಿತಾಂಶಗಳನ್ನು ಹಾಗೂ ಮುನ್ನಡೆಯನ್ನು ಕಾಣಬಹುದು ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.
400ಕ್ಕೂ ಹೆಚ್ಚು ಆರ್ ಅಂಡ್ ಡಿ ಕೇಂದ್ರಗಳು/ಜಿಸಿಸಿಗಳು ರಾಜ್ಯದಲ್ಲಿದ್ದು ದೇಶದ ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ಉದ್ಯಮದಲ್ಲಿ ಅತ್ಯಂತ ಹೆಚ್ಚಿನ ಕೊಡುಗೆ ನೀಡುತ್ತಿದೆ. ಈ ಅಗ್ರ ಶ್ರೇಯಾಂಕವನ್ನು ಕಾಯ್ದುಕೊಳ್ಳುವ ಗುರಿ ನಮಗಿದ್ದು, ಬೌದ್ಧಿಕ ಸ್ವತ್ತುಗಳ ಸೃಷ್ಟಿ ಹಾಗೂ ರಾಜ್ಯವನ್ನು ಕೌಶಲಯುಕ್ತ ಜ್ಞಾನಕಾಶಿಯಾಗಿಸಲು ಇದು ಸಹಕಾರಿ ಆಗುತ್ತದೆ ಎಂದು ಡಿಸಿಎಂ ವಿವರಿಸಿದರು.
ಅತ್ಯಂತ ಪರಿಣಾಮಕಾರಿ ಒಳನೋಟದಿಂದ ಕೂಡಿದ ನೀತಿ ಇದಾಗಿದೆ. ಉದ್ಯಮ ಪ್ರಚಲಿತ ಸ್ಥಿತಿಗತಿಗಳನ್ನು ಅವಲೋಕನ ಮಾಡಿ, ಅದಕ್ಕೆ ತಕ್ಕಂತೆ ಇದನ್ನು ರೂಪಿಸಲಾಗಿದೆ. ರಾಜ್ಯವು ಬಹುರಾಷ್ಟ್ರೀಯ ಕಂಪನಿಗಳ ಪ್ರಶಸ್ತ ಆದ್ಯತೆಯ ತಾಣವನ್ನಾಗಿಸಲು ಈ ನೀತಿ ಅನುವು ಮಾಡಿಕೊಡಲಿದೆ. ಜಾಗತಿಕ ಮುಂಚೂಣಿ ಇ.ಆರ್.&ಡಿ ಕಂಪನಿಗಳು, ಜಾಗತಿಕ ಸಾಮರ್ಥ್ಯ ಕೇಂದ್ರಗಳು (ಜಿಸಿಸಿ), ಎಂಜಿನಿಯರಿಂಗ್ ಸೇವಾದಾತರು ರಾಜ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಹೂಡಿಕೆ ಮಾಡುವಂತೆ ಮಾಡುವುದು ಹಾಗೂ ಹಾಗೆ ಬರುವ ಘಟಕಗಳಿಗೆ ರಾಜ್ಯದಲ್ಲಿ ಸೂಕ್ತ ವಾತಾವರಣ ನಿರ್ಮಿಸಬೇಕು ಎಂಬುದು ಈ ನೀತಿ ಗುರಿ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.
ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ-2021 ಪ್ರಕಟಿಸಿದ ಡಿಸಿಎಂ

