ಆತ್ಮನಿರ್ಭರ ಯೋಜನೆ ಜಾರಿ; ಕರ್ನಾಟಕ ಮುಂದಿದೆ -ಸೋಮಶೇಖರ್ ಶ್ಲಾಘನೆ

ಬೆಂಗಳೂರು: ಆತ್ಮ ನಿರ್ಭರ ಯೋಜನೆಯ ಅನುಷ್ಠಾನದಲ್ಲಿ ದೇಶದಲ್ಲಿಯೇ ಕರ್ನಾಟಕ ರಾಜ್ಯವು ಮುಂದಿದೆ. ಈ ಮೂಲಕ ಪ್ರಥಮ ಸ್ಥಾನದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ಇದಕ್ಕೆ ಕೇಂದ್ರ ಹಾಗೂ ನಬಾರ್ಡ್ ಸಹ ಶ್ಲಾಘನೆ ವ್ಯಕ್ತಪಡಿಸಿದೆ ಎಂದು  ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಆರ್ಥಿಕ ಸ್ಪಂದನ ಹಾಗೂ ಡಿಸಿಸಿ ಬ್ಯಾಂಕುಗಳ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾಧ್ಯಮ  ಪ್ರತಿನಿಧಿಗಳೂಂದಿಗೆ  ಸಚಿವರು ಮಾತನಾಡಿದರು.  ಆತ್ಮನಿರ್ಭರ ಯೋಜನೆಯಡಿ 1 ಸಾವಿರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಪ್ರತಿ ಸಂಘಕ್ಕೆ 2 ಕೋಟಿ ರೂಪಾಯಿಯಂತೆ ಸಾಲ ನೀಡಿಕೆಗೆ ಅವಕಾಶವಿದ್ದು, ಈ ಪೈಕಿ 1549 ಸಹಕಾರ ಸಂಘಗಳನ್ನು ಗುರುತಿಸಿ, 949 ಪ್ಯಾಕ್ಸ್ ಗಳಿಗೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಇದರಲ್ಲಿ 614 ಪ್ಯಾಕ್ಸ್ ಗಳಿಗೆ 198.96 ಕೋಟಿ ರೂಪಾಯಿ ಮಂಜೂರಾಗಿರುತ್ತದೆ ಎಂದು ತಿಳಿಸಿದರು. 
ಹೀಗಾಗಿ ಇದರ ಅನುಷ್ಠಾನಕ್ಕಾಗಿ 21 ಡಿಸಿಸಿ ಬ್ಯಾಂಕ್, ಅಪೆಕ್ಸ್ ಬ್ಯಾಂಕ್ ಹಾಗೂ ಪ್ಯಾಕ್ಸ್ ಗಳ ಮುಖಾಂತರ ಸಮರ್ಪಕವಾಗಿ ಕಾರ್ಯನಿರ್ವಹಿಸಿವೆ ಎಂದು  ಹೇಳಿದರು. 
25-02-2021 ರವರೆಗೆ ಒಟ್ಟು 21.64 ಲಕ್ಷ ರೈತರಿಗೆ ರೂ.14179.22 ಕೋಟಿಗಳ ಅಲ್ಪಾವಧಿ ಕೃಷಿ ಸಾಲ ಮತ್ತು 0.36 ಲಕ್ಷ ರೈತರಿಗೆ ರೂ.800.51 ಕೋಟಿಗಳ ಮಧ್ಯಮಾವಧಿ/ದೀರ್ಘವಧಿ ಸಾಲ ವಿತರಣೆ ಮಾಡಿದ್ದು, ಒಟ್ಟು ರೂ. 14979.73 ವಿತರಿಸಲಾಗಿದೆ ಹಾಗೂ ಶೇ.90.56 ರ ಪ್ರಗತಿ ಸಾಧಿಸಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಾಹಿತಿ ನೀಡಿದರು.
ನಿರುದ್ಯೋಗಿಗಳಿಗೆ ಉದ್ಯೋಗ ಸಿಗಬೇಕು, ಎಲ್ಲರಿಗೂ ಅನುಕೂಲವಾಗಬೇಕು ಎಂಬ ನಿಟ್ಟಿನಲ್ಲಿ ಎಲ್ಲ ಹಾಲು ಒಕ್ಕೂಟಗಳು, ಕ್ರೆಡಿಟ್ ಯೂನಿಯನ್ ಗಳು ಸೇರಿದಂತೆ ಸಹಕಾರ ಇಲಾಖೆಗಳ ಎಲ್ಲ ಸಂಘ ಸಂಸ್ಥೆಗಳಿಗೂ ಮನವಿ ಮಾಡಿದ್ದು, 5 ಸಾವಿರ ಹುದ್ದೆಗಳನ್ನು ಸೃಜಿಸಲು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕೆಲವು ಕಡೆ ಅರ್ಜಿ ಕರೆಯಲಾಗಿದೆ ಎಂದು ಸಚಿವ ಸೋಮಶೇಖರ್  ತಿಳಿಸಿದರು. 
ಅಪೆಕ್ಸ್ ಬ್ಯಾಂಕ್, 21 ಡಿಸಿಸಿ ಬ್ಯಾಂಕ್ ಹಾಗೂ 5400 ಪ್ಯಾಕ್ಸ್ ಗಳಿಗೆ ಏಕರೂಪ ತಂತ್ರಾಂಶ ಅಳವಡಿಸಲು ಚಿಂತನೆ ನಡೆಸಲಾಗಿದ್ದು, ಈ ಮೂಲಕ ಪಾರದರ್ಶಕ ಆಡಳಿತ ನೀಡಲು ಮುಂದಾಗಲಾಗುವುದು. ಇದರಿಂದ ಯಾರಿಗೆ ಸಾಲ ಕೊಡಲಾಗಿದೆ? ಹೊಸಬರಿಗೆ ಸಾಲ ಸಿಗುತ್ತಿದೆಯೇ ಎಂಬಿತ್ಯಾದಿ ಎಲ್ಲ ಮಾಹಿತಿಯನ್ನು ಒಂದೇ ಕಡೆ ಕುಳಿತು ನೋಡುವಂತಾಗಬೇಕು ಎಂಬ ನಿಟ್ಟಿನಲ್ಲಿ ನಾವು ಈಗಾಗಲೇ ಒಂದು ಸಭೆ ನಡೆಸಲಾಗಿದೆ ಎಂದರು. 
ಸಹಕಾರ ಕ್ಷೇತ್ರವು ಹಳ್ಳಿ ಹಳ್ಳಿಗಳಿಗೆ ಮುಟ್ಟಬೇಕು ಹಾಗೂ ಸುಲಭವಾಗಿ ರೈತರಿಗೆ ಮತ್ತು ನಾಗರಿಕರಿಗೆ ಸಾಲ ದೊರೆಯಬೇಕು ಎಂಬ ಹಿನ್ನೆಲೆಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೊಂದು ಸಹಕಾರ ಪತ್ತಿನ ಸಹಕಾರ ಸಂಘ (ಪ್ಯಾಕ್ಸ್)ವನ್ನು  ಸ್ಥಾಪನೆ ಮಾಡುವ ಚಿಂತನೆ ಇದ್ದು, ಈ ಬಗ್ಗೆ ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳು ಘೋಷಣೆ ಮಾಡಲಿದ್ದಾರೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.