ಹುಬ್ಬಳ್ಳಿ: ರಾಜ್ಯದಲ್ಲಿ 1 ರಿಂದ 5 ನೇ ತರಗತಿಗಳನ್ನು ಆರಂಭಿಸುವ ನಿರ್ಧಾರ ಸದ್ಯಕ್ಕಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶಕುಮಾರ ಹೇಳಿದರು.
ನಗರದಲ್ಲಿ ಮಂಗಳವಾರ ಸಚಿವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
1 ರಿಂದ 5 ನೇ ತರಗತಿಗಳನ್ನು ಪ್ರಾರಂಭ ಮಾಡಬಹುದು ಎಂದುಕೊಂಡಿದ್ದೇವು. ಆದರೆ ಕೊರೊನಾ ಸೊಂಕಿನ ಪ್ರಮಾಣ ಹೆಚ್ಚಾಗಿದೆ. ಅಲ್ಲದೆ ದೇಶದ 6 ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ ಎಂದು ಕೇಂದ್ರ ಹೇಳಿದ್ದು, ಅದರಲ್ಲಿ ಕರ್ನಾಟಕ ರಾಜ್ಯದಲ್ಲಿಯೂ ಪ್ರಕರಣಗಳು ಹೆಚ್ಚಾಗುತ್ತಿರುವುದು ಕಂಡು ಬಂದಿದೆ ಎಂದರು.
ನಮ್ಮ ನೆರೆರಾಜ್ಯಗಳಾದ ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಸೊಂಕು ಹೆಚ್ಚಾಗಿ ಉಲ್ಬಣಿಸುತ್ತಿದೆ. ಹಾಗಾಗಿ ನಾವು ಸದ್ಯ ಆರೋಗ್ಯ ಇಲಾಖೆಯ ಸಲಹೆ ಮತ್ತು ಶಿಫಾರಸ್ಸಿಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದರು.
ಈ ವಾರ ಮತ್ತೊಮ್ಮೆ ತಜ್ಞರ ಜೊತೆ ಕೂಲಂಕುಷವಾಗಿ ಚರ್ಚಿಸುತ್ತೇವೆ ಎಂದರು.
ಖಾಸಗಿ ಶಾಲೆಗಳನ್ನು ಕೂಡಾ ಆರಂಭ ಮಾಡಬಾರದು. ಒಂದು ವೇಳೆ ಆರಂಭಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ನಮಗೆ ಮಕ್ಕಳ ಆರೋಗ್ಯ ಮುಖ್ಯ ಎಂದವರು ಹೇಳಿದರು.
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲು ಈಗಾಗಲೇ ಸಚಿವ ಸಂಪುಟ ತಾತ್ವಿಕ ಒಪ್ಪಿಗೆ ನೀಡಿದೆ. ಅಲ್ಲದೆ ರಾಜ್ಯದ ಕಾರ್ಯಪಡೆ ವರದಿ ನೀಡಿದೆ. ಅದನ್ನು ಯಾವ ರೀತಿಯಾಗಿ ಅನುಷ್ಠಾನ ಮಾಡಬೇಕು ಎನ್ನುವ ನಿರ್ಧಾರ ಮಾಡಬೇಕಿದೆ ಎಂದು ಸಚಿವ ಸುರೇಶ ಕುಮಾರ ತಿಳಿಸಿದರು.
1ರಿಂದ 5 ನೇ ತರಗತಿ ಆರಂಭ ಸದ್ಯಕ್ಕಿಲ್ಲ -ಸಚಿವ ಸುರೇಶಕುಮಾರ

