ಮೈಸೂರು: ರಾಜಕಾರಣಿಗಳ ಸಿ.ಡಿ.ಗಳಿವೆ ಇವೆ ಎನ್ನುವವರನ್ನು ಮೊದಲು ಒದ್ದು ಒಳಗಾಕಿ ಎರೋಪ್ಲೇನ್ ಹತ್ತಿಸಿ. ಅಂಥವರನ್ನು ಬಂಧಿಸಿ ಅವರ ಬಳಿ ಇರುವ ಸಿ.ಡಿ.ಗಳನ್ನು ಸರಕಾರವೇ ಜನರ ಮುಂದೆ ಬಿಡುಗಡೆ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸರಕಾರವನ್ನು ಆಗ್ರಹಿಸಿದ್ದಾರೆ.
ಸಿ.ಡಿ. ಇದೆ ಎಂದು ಹೇಳಿಕೊಂಡು ಕೆಲವರು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ಇದು ಬ್ಲ್ಯಾಕ್‌ಮೇಲ್‌ನ ಕಾರ್ಯತಂತ್ರ. ರಾಜಕಾರಣಿಗಳ ಸಿ.ಡಿ. ಇದೆ ಎನ್ನುವವರನ್ನು ಮೊದಲು ಒದ್ದು ಒಳಕ್ಕೆ ಹಾಕಿ. ಅಂಥವರನ್ನು ಪ್ರೋತ್ಸಾಹಿಸಬೇಡಿ, ಬೆಳೆಸಬೇಡಿ ಎಂದು ಅವರು ಶುಕ್ರವಾರ ಮಾಧ್ಯಮಗಳ ಜತೆ ಮಾತನಾಡುತ್ತಾ ಹೇಳಿದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ 5 ಕೋಟಿ ರೂಪಾಯಿ ಡೀಲ್ ನಡೆದಿದೆ. ಇದು ನನಗಿರುವ ಮಾಹಿತಿ. ಕಳೆದು ಮೂರು ತಿಂಗಳಿನಿಂದ ಈ ಡೀಲ್ ವ್ಯವಹಾರ ನಡೆದಿದೆ. ದೊಡ್ಡ ದೊಡ್ಡವರೇ ಈ ಪ್ರಕರಣದಲ್ಲಿ ಇದ್ದಾರೆ. ಸರಿಯಾಗಿ ತನಿಖೆ ಮಾಡಿಸುವ ಜವಬ್ದಾರಿ ಸರಕಾರದ್ದು ಎಂದರು ಎಚ್‌ಡಿಕೆ.
ಸರಕಾರ ಬೀಳಿಸಿದರು ಎನ್ನುವ ಕಾರಣಕ್ಕೆ ನಾನು ಒಂದು ಕಲ್ಲು ಹೊಡೆಯಬೇಕು ಅಂತ ಹೊಡೆಯೋದಿಲ್ಲ. ಇದೀಗ ಹಲವು ರೀತಿಯ ವ್ಯಾಖ್ಯಾನ ಶುರುವಾಗಿದೆ. ಆ ಮಂತ್ರಿಯ ರಾಜೀನಾಮೆ ಕೊಡಿಸಬೇಕೆಂಬ ಉದ್ದೇಶ ಇತ್ತು ಕೆಲವರಿಗೆ. ಈಗ ಆ ರಾಜೀನಾಮೆ ಕೊಡಿಸುವಲ್ಲಿ ಅವರು ಸಫಲರಾಗಿದ್ದಾರೆ. ಈಗ ಆ ಹೆಣ್ಣು ಮಗಳನ್ನ ಕಟ್ಟಿಕೊಂಡು ಅವರಿಗೆ ಏನಾಗಬೇಕು? ಎಂದು ಅವರು ಪ್ರಶ್ನಿಸಿದರು.
ಅವರಿಬ್ಬರೇ ಆ ವಿಡಿಯೋ ಮಾಡಿಕೊಂಡಿದ್ದಾರೆ. ಆದರೆ, ಆ ವಿಡಿಯೋ ಹೊರಗೆ ಕೊಟ್ಟವರು ಯಾರು? ಗೊತ್ತಿಲ್ಲ? ಇಂತಹ ವಿಚಾರದಲ್ಲಿ ಸುಮ್ಮನ್ನೇ ಕಲ್ಲು ಹೊಡೆಯಬಾರದು. ಇವತ್ತು ರಾಜಕೀಯ ತುಂಬಾ ಕಲುಷಿತವಾಗಿದೆ. ಕೆಸರು ನಮ್ಮ ಮೇಲೆ ನಾವೇ ಎರಚಿಕೊಂಡ ಹಾಗೆ. ಇಂತಹ ಪ್ರಕರಣದಿಂದ ನಮ್ಮನ್ನು ಜನ ತಪ್ಪಾಗಿ ತಿಳಿದುಕೊಳ್ಳುತ್ತಾರೆ. ಮೊದಲು ಸಿ.ಡಿ.ಗಳನ್ನು ಹಿಡಿದುಕೊಂಡು ಓಡಾಡುವ ಇಂಥವರನ್ನು ಒದ್ದು ಒಳಗೆ ಹಾಕಬೇಕು ಎಂದರು.
ಇಂಥ ಸಿ.ಡಿ. ರಿಲೀಸ್ ಮಾಡುವ ವ್ಯಕ್ತಿಗಳನ್ನು ಪ್ರೋತ್ಸಾಹ ಮಾಡಬಾರದು. ಅದ್ಯಾರೋ ಒಬ್ಬ ಮಾಜಿ ಸಿಎಂ ಅದೆಲ್ಲೋ ಹೋಗಿ ಬರುತ್ತಾರೆ. ಅದರ ಸಿ.ಡಿ. ನನ್ನ ಬಳಿ ಇದೆ ಅಂತಾನೆ. ರಾಜ್ಯದಲ್ಲಿ ದೇವೇಗೌಡ, ಎಸ್‌ಎಂ ಕೃಷ್ಣ, ಸದಾನಂದಗೌಡ, ಜಗದೀಶ್ ಶೆಟ್ಟರ್ ಹಾಗೂ ನಾನು ಇದ್ದೀವಿ. ಯಾರು ಆ ಮಾಜಿ ಸಿಎಂ ಎಂಬುದನ್ನು ಮೊದಲು ಬಾಯಿ ಬಿಡಿಸಿ ಎಂದು ಎಚ್‌ಡಿಕೆ ಒತ್ತಾಯಿಸಿದರು.
ಸುಮ್ಮನೆ ನಾವು ಹೊರಗೆ ಓಡಾಡುವಾಗ ಮುಜುಗರ ತರಬೇಡಿ. ಹಿಂದೆ ಅದ್ಯಾವುದೋ ಆಂಕರ್ ವಿಚಾರದಲ್ಲೂ ನನ್ನ ಹೆಸರು ತಂದರು. ಆಗಲು ಸರಿಯಾಗಿ ಝಾಡಿಸಿದ್ದೇನೆ. ನನಗೆ ಈ ವಿಚಾರದಲ್ಲಿ ಯಾವುದೇ ಭಯವಿಲ್ಲ. ನಾನು ತುಂಬಾ ಕ್ಲೀನ್ ಆಗಿದ್ದೇನೆ. ನನ್ನ ಉದ್ದೇಶ ಏನೆಂದರೆ ಇಂತಹ ಬ್ಲ್ಯಾಕ್‌ಮೇಲ್‌ಗಳು ನಿಲ್ಲಬೇಕು ಎಂದು ಹೇಳಿದರು.
ಮೈಸೂರು ಮೇಯರ್ ಚುನಾವಣೆ ಮೈತ್ರಿ ವಿಚಾರದಲ್ಲಿ ತನ್ವೀರ್ ಸೇಠ್ ರಾಜಕೀಯವಾಗಿ ತಬ್ಬಲಿಯಾದರೆ ಅವರಿಗೆ ಜೆಡಿಎಸ್ ರಕ್ಷಣೆ ಕೊಡಲಿದೆ. ಅವರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಆದರೆ, ತನ್ವೀರ್ ಅವರಿಗೆ ಈಗ ರಕ್ಷಣೆಯ ಅವಶ್ಯಕತೆ ಇಲ್ಲ. ಅವರನ್ನ ಸೋಲಿಸಲು ನಾವು ಪ್ರಯತ್ನಪಟ್ಟಿದ್ದೇವೆ, ಬೇರೆಯವರೂ ಪ್ರಯತ್ನಿಸಿದ್ದಾರೆ. ಆಗಿಲ್ಲ. ಆದರೆ ಆ ಕ್ಷೇತ್ರದಲ್ಲಿ ಅವರದ್ದೇ ಶಕ್ತಿ ಇದೆ ಎಂದರು ಕುಮಾರಸ್ವಾಮಿ ತಿಳಿಸಿದರು.
ಮೊದಲು ಹಣದಿಂದ ಚುನಾವಣೆ ನಡೆಯೋದು ನಿಲ್ಲಲ್ಲಿ. ಚುನಾವಣೆಯ ವ್ಯವಸ್ಥೆಯ ಲೋಪ ತೊಲಗಲಿ. ಹಣವಿದ್ದವರಿಗೆ ಮಾತ್ರ ಚುನಾವಣೆ ಅನ್ನೋದು ನಿಲ್ಲಬೇಕು. ಆಮೇಲೆ ಮಾತಾಡೋಣ ಎಂದರು.
ʼಒನ್ ನೇಷನ್-ಒನ್ ಎಲೆಕ್ಷನ್ʼ ವಿಚಾರದಲ್ಲಿ ಕಾಂಗ್ರೆಸ್ ಯೂ ಟರ್ನ್ ಹೊಡೆದಿದೆ. ಈ ವಿಚಾರದ ಚರ್ಚೆಯಲ್ಲಿ ಕಾಂಗ್ರೆಸ್ ಮೊದಲು ಭಾಗವಹಿಸಿತ್ತು. ಆ ನಂತರ ಸದನದಲ್ಲಿ ಯು ಟರ್ನ್ ಹೊಡೆಯಿತು. ಇದು ಯಾಕೆ ಅಂತ ಗೊತ್ತಾಗಲಿಲ್ಲ. ಪ್ರಸ್ತುತ ರಾಜಕಾರಣದ ಸ್ಥಿತಿ ಪ್ರಜಾಪ್ರಭುತ್ವದ ವ್ಯವಸ್ಥೆ ಬುಡಮೇಲು ಮಾಡಲಿದೆ. ಮೊದಲು ಅದು ಕೊನೆಯಾಗಬೇಕು ಎಂದು ಅವರು ಹೇಳಿದರು.
ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ೫ ಕೋಟಿ ಡೀಲ್; ಇಂಥ ಸಿ.ಡಿ.ಗಳಿವೆ ಎನ್ನುವರನ್ನು ಒದ್ದು ಒಳಗಾಕಿ ಎರೋಪ್ಲೇನ್ ಹತ್ತಿಸಿ -ಎಚ್‌ಡಿಕೆ

