4 ತ್ರಿಸ್ಟಾರ್ ಹೋಟೆಲ್ ಗಳ ನಿರ್ಮಾಣಕ್ಕೆ ಚಾಲನೆ -ಸಚಿವ ಸಿಪಿ ಯೋಗೇಶ್ವರ್

ಬೆಂಗಳೂರು: ಪ್ರವಾಸೋದ್ಯಮ ಇಲಾಖೆಯಿಂದ 4 ತ್ರಿಸ್ಟಾರ್ ಹೋಟೆಲ್ ಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದೆಂದು ಪ್ರವಾಸೋದ್ಯಮ ಸಚಿವ ಸಿಪಿ ಯೋಗೇಶ್ವರ್ ತಿಳಿಸಿದ್ದಾರೆ.
ತ್ರಿಸ್ಟಾರ್ ಹೋಟೆಲ್ ಗಳ ನಿರ್ಮಾಣವನ್ನು 18 ತಿಂಗಳಲ್ಲಿ ಪೂರ್ಣಗೊಳಿಸಿ ಪ್ರವಾಸಿಗರ ಸೇವೆಗೆ ಸಮರ್ಪಣೆ ಮಾಡಲಾಗುವುದೆಂದು ಅವರು ಹೇಳಿದರು.
ದೇಶ ವಿದೇಶಗಳಿಂದ ರಾಜ್ಯಕ್ಕೆ ಬರುವ ಪ್ರವಾಸಿಗರಿಗೆ ವಿಶ್ವದರ್ಜೆಯ ಸೌಲಭ್ಯಗಳನ್ನು ಕಲ್ಪಿಸಲು ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಾದ ಬೇಲೂರು, ಹಂಪಿ, ಬಾದಾಮಿ ಹಾಗೂ ವಿಜಯಪುರ ಗಳಲ್ಲಿ ತ್ರಿಸ್ಟಾರ್ ಹೋಟೆಲ್ ನಿರ್ಮಾಣ ಮಾಡಲಾಗುವುದು ಎಂದರು.
ವಿಜಯಪುರದಲ್ಲಿ 57, ಬಾದಾಮಿಯಲ್ಲಿ 72, ಹಂಪಿಯಲ್ಲಿ 75-100 ಹಾಗೂ ಬೇಲೂರಿನಲ್ಲಿ 75 ಕೊಠಡಿಗಳ ತ್ರಿಸ್ಟಾರ್ ಹೋಟೆಲ್ ನಿರ್ಮಾಣ ಮಾಡಲಾಗುವುದು ಎಂದು ಅವರು ಹೇಳಿದರು.
ಬೇಲೂರು 20.71 ಕೋಟಿ ರೂಪಾಯಿಗಳು, ಬಾದಾಮಿ 18.32 ಕೋಟಿ, ವಿಜಯಪುರ 16.74 ಕೋಟಿ, ಹಾಗೂ ಹಂಪಿಯಲ್ಲಿ 28.20 ಕೋಟಿ ರೂಪಾಯಿಗಳು ಅಂದಾಜು 83.97 ಕೋಟಿ ರೂಪಾಯಿಗಳ ವೆಚ್ಚದಲ್ಲಿ 4 ತ್ರಿಸ್ಟಾರ್ ಹೋಟೆಲ್ ಗಳನ್ನು ನಿರ್ಮಾಣ ಮಾಡಲಾಗುವುದು ಎಂದವರು ವಿವರಿಸಿದರು.
ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಮೆ: ರೈಟ್ಸ್ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಂಡಿದೆ. ಮುಂದಿನ ತಿಂಗಳು ನಾಲ್ಕು ಹೋಟೆಲ್ ಗಳಿಗೆ ಗುದ್ದಲಿ ಪೂಜೆ ಮಾಡಿ ಕಾಮಗಾರಿ ಆರಂಭಿಸುವುದಾಗಿ ಸಚಿವರು ತಿಳಿಸಿದರು.
ಹಂಪಿಯಲ್ಲಿ 9.5 ಎಕರೆ ಪ್ರದೇಶದಲ್ಲಿ ಬೇಲೂರಿನಲ್ಲಿ ಯಗಚಿ ಅಣೆಕಟ್ಟಿನ ಸಮೀಪ 6 ಎಕರೆ ಪ್ರದೇಶದಲ್ಲಿ ಬಾದಾಮಿಯಲ್ಲಿ ಬನಶಂಕರಿ ದೇವಾಲಯದ ಸಮೀಪ ಹಾಗೂ ವಿಜಯಪುರದಲ್ಲಿ ಹತ್ತು ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಹಾಗೂ ಸುಸಜ್ಜಿತವಾದ ಹೋಟೆಲ್ ಗಳನ್ನು ನಿರ್ಮಾಣ ಮಾಡುವುದಾಗಿ ಸಚಿವ ಯೋಗೇಶ್ವರ್ ತಿಳಿಸಿದರು.
ಹಂಪಿ ಬೇಲೂರು ಬಾದಾಮಿ ಹಾಗೂ ವಿಜಯಪುರ ಗಳಲ್ಲಿ ಪ್ರವಾಸಿಗರಿಗೆ ತಂಗಲು ಹೋಟೆಲ್ ಗಳು ಇರಲಿಲ್ಲ. ಹೀಗಾಗಿ ವಿಶ್ವವಿಖ್ಯಾತ ಪ್ರವಾಸಿ ತಾಣಗಳಲ್ಲಿ ಹೋಟೆಲ್ ಗಳನ್ನು ನಿರ್ಮಿಸುವುದಾಗಿ ಅವರು ತಿಳಿಸಿದರು.
ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರೀತಿ ರಾಜಿ ಆಗಬಾರದು ಸುಂದರವಾದ ವಿನ್ಯಾಸದೊಂದಿಗೆ ನಿಗದಿಪಡಿಸಿದ ಸಮಯದಲ್ಲಿ ಹೋಟೆಲ್ ಗಳನ್ನು ನಿರ್ಮಾಣ ಮಾಡುವಂತೆ ಮ:ರೈಟ್ಸ್ ಕಂಪನಿಗೆ ಸೂಚಿಸಿರುವುದಾಗಿ ಸಚಿವರು ಹೇಳಿದರು.
ಮೆ: ರೈಟ್ಸ್ ಸಂಸ್ಥೆಯ ಸೀನಿಯರ್ ಡೆಪ್ಯೂಟಿ ಜನರಲ್ ಮ್ಯಾನೇಜರ್ ಎಂ.ಜಿ.ಸುದೀಪ್, ವಾಸ್ತುಶಿಲ್ಪಿ ಬಾಲಯ್ಯ, ಮ್ಯಾನೇಜರ್ ನೇಹಾಜೈನ್ ಹಾಗೂ ಎಂಜಿನಿಯರ್ ಗಿರೀಶ್, ಕೆ ಎಸ್ .ಟಿ .ಡಿ ಸಿ ಎಂಡಿ ವಿಜಯ್ ಶರ್ಮ, ಜಂಗಲ್ ಲಾಡ್ಜ್ ಸ್ ಎಂಡಿ ಕುಮಾರ್ ಪುಷ್ಕರ್ ಉಪಸ್ಥಿತರಿದ್ದರು.