ನಾನು ಕಾಂಗ್ರೆಸ್ ಸೇರಲು ತೀರ್ಮಾನ ಮಾಡಿದ್ದೇನೆ -ಮಧು ಬಂಗಾರಪ್ಪ

ಬೆಂಗಳೂರು: ನಾನು ಕಾಂಗ್ರೆಸ್ ಸೇರಲು ತೀರ್ಮಾನ ಮಾಡಿದ್ದೇನೆ ಎಂದು ಸೊರಬ ಕ್ಷೇತ್ರದ ಜೆಡಿಎಸ್ ಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿದರು.
ನಗರದಲ್ಲಿ ಗುರುವಾರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ನಾನು ಕಾಂಗ್ರೆಸ್ ಸೇರುವ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಗುರುವಾರ ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ಇಂದಿನಿಂದಲೇ ಕೆಲಸ ಮಾಡಲು ಅವರು ಹೇಳಿದ್ದಾರೆ ಎಂದು ಮಧು ಬಂಗಾರಪ್ಪ ತಿಳಿಸಿದರು.
ಸಿದ್ದರಾಮಯ್ಯ ಹಿರಿಯರು, ಅವರು ಮುಖ್ಯಮಂತ್ರಿ ಆಗಿದ್ದವರು. ನಮ್ಮ ತಂದೆನೂ ಮುಖ್ಯಮಂತ್ರಿ ಆಗಿದ್ದವರು. ಹೀಗಾಗಿ ಅವರನ್ನು ಭೇಟಿಯಾಗಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಶುಕ್ರವಾರ ಭೇಟಿ ಮಾಡ್ತೇನೆ ಎಂದು ಮಧು ಬಂಗಾರಪ್ಪ ಹೇಳಿದರು.
ಸೊರಬ ಕ್ಷೇತ್ರದಲ್ಲಿ ಮುಂದಿನ ಏಪ್ರಿಲ್ ತಿಂಗಳಲ್ಲಿ ಸಮಾವೇಶ ಆಯೋಜಿಸಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರುತ್ತೇನೆ ಎಂದು ಅವರು ತಿಳಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮಧು ಬಂಗಾರಪ್ಪ, ನಾನು ಜೆಡಿಎಸ್‍ನಲ್ಲಿ ಯಾವತ್ತೂ ಅಧಿಕಾರ ಅನುಭವಿಸಿಲ್ಲ. ಕಾಂಗ್ರೆಸ್‍ನಲ್ಲಿ ಬೆಳೆಯಲು ಅವಕಾಶ ಇದೆ, ಅದಕ್ಕೆ ಕಾಂಗ್ರೆಸ್ ಗೆ ಸೇರುತ್ತಿದ್ದೇನೆ ಎಂದರು.