ಮುಖ್ಯಮಂತ್ರಿ ವಿಡಿಯೋ ವರ್ಷದಷ್ಟು ಹಳೆಯದು; ಸುಳ್ಳು ಸುದ್ದಿ ನಂಬಬೇಡಿ ಎಂದ ಸಿಎಂ ಕಚೇರಿ

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಕೋವಿಡ್‍ಗೆ ಸಂಬಂಧಿಸಿದಂತೆ ಸುಳ್ಳು ಸುದ್ದಿಗಳನ್ನು ಹರಡುವ ಚಾಳಿ ಮುಂದುವರಿದಿದೆ.
ಬುಧವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೋವಿಡ್ ಪೀಡಿತ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಮಾತುಕತೆ ನಡೆಸಿದ ನಂತರ, ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅಧಿಕೃತ ಹೇಳಿಕೆ ನೀಡುವ ಮುನ್ನವೇ ಸುದ್ದಿವಾಹಿನಿಯೊಂದರ ಹಳೆಯ ವಿಡಿಯೋ ಕ್ಲಿಪ್ ಒಂದನ್ನು ಜಾಲತಾಣಗಳಲ್ಲಿ ಹರಿದುಬಿಟ್ಟ ಕಿಡಿಗೇಡಿಗಳು ಜನರಲ್ಲಿ ಗೊಂದಲ ಉಂಟು ಮಾಡಿದರು.
ವರ್ಷದ ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದ್ದ ಹೇಳಿಕೆ ಅದಾಗಿದೆ.
ಒಂದು ವಾರದ ಕಾಲ ಸಿನಿಮಾ, ಮಾಲ್‍ಗಳು, ಪ್ರದರ್ಶನಗಳು, ಈಜುಕೊಳಗಳು, ಬೇಸಿಗೆ ಶಿಬಿರ, ಕ್ರೀಡಾಕೂಟ, ಮದುವೆ, ಸಮಾವೇಶಗಳು, ಪಾರ್ಟಿಗಳನ್ನು ಬಂದ್ ಮಾಡುವುದಾಗಿ ಹೇಳಿದ್ದರು. ಅದೇ ವಿಡಿಯೋವನ್ನು ಕಿಡಿಗೇಡಿಗಳು ಜಾಲತಾಣಗಳಲ್ಲಿ ತೇಲಿಬಿಟ್ಟರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಕಾರ್ಯಾಲಯದ ಮಾಧ್ಯಮ ವಿಭಾಗ, ಇದು ಸುಳ್ಳು. ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಒಂದು ವರ್ಷ ಹಳೆಯದ್ದು ಎಂದು ತಿಳಿಸಿದ್ದಾರೆ.