ಸಿಡಿ ಪ್ರಕರಣ: ವಿಡಿಯೋ ಬಿಡುಗಡೆ ಮಾಡಿರುವ ಭವಿತ್, ನರೇಶ್

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಹೆಸರು ಕೇಳಿಬಂದಿರುವುದಕ್ಕೆ ಮಾಜಿ ಪತ್ರಕರ್ತರಾದ ನರೇಶ್ ಗೌಡ ಮತ್ತು ಭವಿತ್ ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿ ಬಿಡುಗಡೆಗೊಳಿಸಿದ್ದಾರೆ.
ಸಿಡಿ ಪ್ರಕರಣದಲ್ಲಿ ನನ್ನ ಹೆಸರು ಕೇಳಿಬಂದಿರುವುದು ಆಘಾತ ಉಂಟು ಮಾಡಿದೆ ಎಂದು ಭವಿತ್ ವಿಡಿಯೋದಲ್ಲಿ
ಹೇಳಿದ್ದಾರೆ. ನಾನು ಪ್ರಕರಣದ ಸೂತ್ರದಾರನೂ ಅಲ್ಲ, ಭಾಗಿಯೂ ಆಗಿಲ್ಲ ಎಂದು ತಿಳಿಸಿದ್ದಾರೆ.
ನನ್ನ ವಿರುದ್ಧದ ಆರೋಪಗಳು ಸುಳ್ಳು. ಎಸ್‍ಐಟಿ ಅಧಿಕಾರಿಗಳು ವಿಚಾರಣೆಗೆ ಕರೆದಿದ್ದು ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ.
ಪ್ರಕರಣದಲ್ಲಿ ನನ್ನ ಹೆಸರು ಕೇಳಿಬಂದಿರುವುದು ನನ್ನ ತೇಜೋವಧೆ ಆಗುತ್ತಿದೆ. ನನ್ನ ತಾಯಿ ಹಾರ್ಟ್ ಪೇಶೆಂಟ್, ನನ್ನ ಮನೆಗೆ ಹೋಗಿ ನೋಡಿ, ನನ್ನ ಪರಿಸ್ಥಿತಿ ನಿಮಗೆ ಅರ್ಥವಾಗುತ್ತದೆ. ಕುಟುಂಬದ ಗೌರವ ಹಾಳು ಮಾಡುವುದು ಎಷ್ಟು ಸರಿ? ಎಂದಿದ್ದಾರೆ.
ನರೇಶ್ ಗೌಡ ಸಹ ವಿಡಿಯೋ ಬಿಡುಗಡೆಗೊಳಿಸಿದ್ದು ಅದರಲ್ಲಿ, ನಾನು ಎಸ್‍ಐಟಿ ತನಿಖಾಧಿಕಾರಿಗಳ ಮುಂದೆ ಬಂದರೆ ನನ್ನನ್ನು ಈ ಪ್ರಕರಣದಲ್ಲಿ ಸಿಕ್ಕಿಸಲು ಎಲ್ಲ ಪ್ರಯತ್ನಗಳು ನಡೆದಿರುವುದು ತಿಳಿದಿದೆ. ಈ ಕಾರಣಕ್ಕೆ ನಾನು ಈಗ ಬಂದಿಲ್ಲ. 4-5 ದಿನಗಳ ಒಳಗಡೆ ನಾನೇ ತನಿಖಾಧಿಕಾರಿಗಳ ಮುಂದೆ ಹಾಜರಾಗುತ್ತೇನೆ ಎಂದು ತಿಳಿಸಿದ್ದಾರೆ.
ರಮೇಶ್ ಜಾರಕಿಹೊಳಿ ನಿರಪರಾಧಿ ಎಂದು ಬಿಂಬಿಸಲಾಗುತ್ತಿದೆ. ಹೆಣ್ಣು ಮಗಳನ್ನು ಅಪರಾಧಿ ಥರ ಬಿಂಬಿಸಲಾಗುತ್ತಿದೆ. ಕನ್ನಡಿಗರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ, ಆ ಹುಡುಗಿ ಪರ ನಿಲ್ಲೋದು ನಮ್ಮ ಧರ್ಮ. ನಮ್ಮನ್ನು ಈ ಪ್ರಕರಣದಲ್ಲಿ ಸಿಲುಕಿಸಲು ಷಡ್ಯಂತ್ರ ನಡೆಯುತ್ತಿದೆ ಎಂದು ಹೇಳಿದ್ದಾರೆ.