ಡಾ. ಗುರುಪ್ರಸಾದ ಎಚ್. ಎಸ್.
ಲೇಖಕರು ಮತ್ತು ಉಪನ್ಯಾಸಕರು
dr.guruhs@gmail.com
ಮಾನವ ಹಾಗೂ ಪ್ರಾಣಿ-ಪಕ್ಷಿ ಸಂಕುಲ ಆಹಾರವಿಲ್ಲದೆ ಹಲವಾರು ದಿನಗಳು ಬದುಕಬಹುದು. ಆದರೆ, ಕುಡಿಯುವ ನೀರಿಲ್ಲದೆ ಒಂದು ದಿನ ಬದುಕುವುದೂ ಅತೀ ಕಷ್ಟದ ಮಾತು.
ತಿನ್ನಲು ಆಹಾರವಿಲ್ಲದಿದ್ದರೂ ಸಹ ಕುಡಿಯುವ ನೀರು ನಮ್ಮ ಜೀವವನ್ನು ಹಲವು ದಿನಗಳ ಕಾಲ ಉಳಿಸುವ ಸಂಜೀವಿನಿಯೇ ಸರಿ. ಈ ಸತ್ಯ ಸಂಗತಿಯಿಂದಾಗಿಯೇ, ಪ್ರತೀ ಜೀವ ಸಂಕುಲಕ್ಕೆ ನೀರು ಎಂಬುದು ಪ್ರಕೃತಿ ನೀಡಿರುವ ಜೀವಹನಿ ಅಮೃತ.
ನಿಸರ್ಗದತ್ತವಾಗಿ ದೊರಕುವ ಜಲದ ಪ್ರಾಮುಖ್ಯತೆ, ಮಹತ್ವ, ಅಗತ್ಯತೆ ಹಾಗೂ ಅಮೂಲ್ಯತೆಯನ್ನು ವಿಶ್ವದ ಮನುಕುಲಕ್ಕೆ ಅರ್ಥವಾಗಿಸುವ ಸಲುವಾಗಿ ಪ್ರತಿ ವರ್ಷ ಮಾರ್ಚ್ 22ನ್ನು ವಿಶ್ವ ಜಲ ದಿನವನ್ನಾಗಿ ಪ್ರಪಂಚದೆಲ್ಲೆಡೆ ಆಚರಿಸಲಾಗುತ್ತದೆ.
ದಿನಾಚರಣೆಯ ಈ ವರ್ಷದ ಘೋಷವಾಕ್ಯ: ಮೌಲ್ಯಯುತವಾದ ನೀರು
(Valuing Water-21) 21ನೇ ಶತಮಾನದಲ್ಲಿ ನಾವು ಎದುರಿಸುವ ನೀರಿನ ಸವಾಲುಗಳಿಗೆ ಪ್ರಕೃತಿ ಆಧಾರಿತ ಪರಿಹಾರಗಳ ಅನ್ವೇಷಣೆ ಮತ್ತು ಮೌಲ್ಯೀಕರಣ ಎಂಬುದಾಗಿದೆ.
ಭೂಮಿಯ ಶೇ.70ಕ್ಕೂ ಹೆಚ್ಚು ಭಾಗವನ್ನು ಆವರಿಸಿರುವ ನೀರಿನಲ್ಲಿ ಕುಡಿಯಲು ಹಾಗೂ ದಿನ ಬಳಕೆಗೆ ಯೋಗ್ಯವಾಗಿರುವುದು (ಸಿಹಿ ನೀರು) ಕೇವಲ ಶೇ. 2ರಿಂದ 3ರಷ್ಟು ಮಾತ್ರ ಎಂಬುದು ಅಚ್ಚರಿಯ ಸಂಗತಿ. ಈ ಯೋಗ್ಯ ನೀರಿನಲ್ಲಿ ಶೇ. 1ರಷ್ಟು ಧ್ರುವ ಪ್ರದೇಶಗಳ ಹಿಮ ಮತ್ತು ನೀರ್ಗಲ್ಲುಗಳ ರೂಪದಲ್ಲಿ ಅಡಗಿ ಕುಳಿತಿದೆ.
ಉಳಿದ ಭಾಗ ಕೆರೆ, ನದಿ, ಹಳ್ಳ-ಕೊಳ್ಳ, ಸರೋವರಗಳಲ್ಲಿ ಲಭ್ಯವಿದೆ. ಭೂಮಿಯ ಮೇಲೆ ಅತಿ ಹೆಚ್ಚು ನೀರು ಸಮುದ್ರ ಮತ್ತು ಸಾಗರಗಳಲ್ಲಿ ಇದೆಯಾದರೂ ಅದು ಮಾನವರಿಗೆ ಕುಡಿಯಲು ಹಾಗೂ ದೈನಂದಿನ ಬಳಕೆಗೆ ಸ್ವಲ್ಪವೂ ಯೋಗ್ಯವಾಗಿಲ್ಲ.
ದೂರದಿಂದ ಕೊಡ ನೀರು ಹೊತ್ತುತರುವುದು, ತಳ್ಳುಗಾಡಿಗಳಲ್ಲಿ ನೀರನ್ನು ಒಯ್ಯುವುದು ಅಥವಾ ನೀರಿಗಾಗಿ ಕೊಳವೆ ಬಾವಿ, ನೀರಿನ ಟ್ಯಾಂಕರ್ ಮುಂದೆ ಮಹಿಳೆಯರು ಸಾಲುಗಟ್ಟಿ ನಿಲ್ಲುವ ದೃಶ್ಯಗಳು ಮಾಮೂಲಾಗಿವೆ.
ಭಾರತದಲ್ಲಿ ಈಗಲೂ ಸುಮಾರು 7.6 ಕೋಟಿ ಜನರಿಗೆ ಸುರಕ್ಷಿತವಾದ ಕುಡಿಯುವ ನೀರಿನ ಲಭ್ಯತೆ ಇಲ್ಲ.
ಈ ಸ್ಥಿತಿ ಬರದಂತೆ ಮತ್ತು ನಮ್ಮ ಮುಂದಿನ ಪೀಳಿಗೆಗೆ ನೀರಿನ ಮೂಲಗಳನ್ನು ಉಳಿಸುವ ಪ್ರಕ್ರಿಯೆಯಲ್ಲಿ ಇಂದೇ ನಮ್ಮನ್ನು ನಾವು ತೊಡಗಿಸಿಕೊಳ್ಳೋಣ
ಕಾರ್ಖಾನೆಗಳು ಹೊರಬಿಡುವ ತ್ಯಾಜ್ಯ ಸೇರಿದಂತೆ ಹಲವು ಕಾರಣಗಳಿಗಾಗಿ ಮಲಿನಗೊಳ್ಳುತ್ತಿರುವ ನದಿಗಳಿಂದಾಗಿ ನೀರಿನ ಸಮಸ್ಯೆ ಮತ್ತಷ್ಟು ದೊಡ್ಡದಾಗುತ್ತಿದೆ. ಇಂತಹ ಸಂದರ್ಭದಲ್ಲಿ ಇಂದು ಈ ಬಾರಿಯ ವಿಶ್ವ ಜಲ ದಿನವನ್ನು ನಾವು ಆಚರಿಸುತ್ತಿದ್ದೇವೆ.
‘ನೀರನ್ನು ಏಕೆ ಪೆÇೀಲು ಮಾಡಬೇಕು’ ನಮ್ಮ ಮನೆ, ನಗರ, ಉದ್ಯಮ ಹಾಗೂ ಕೃಷಿ ಚಟುವಟಿಕೆಗಳಲ್ಲಿ ಬಳಕೆಯಾಗಿ ಹರಿದು ಹೋಗುವ ತ್ಯಾಜ್ಯ ನೀರಿನ ಪ್ರಮಾಣ ದೊಡ್ಡದು.
ಈ ನೀರು ಸಂಸ್ಕರಣಗೊಂಡು ಮರುಬಳಕೆಯಾಗದೆ ವ್ಯರ್ಥವಾಗುತ್ತಿದೆ. ಜೊತೆಗೆ ಮಾಲಿನ್ಯವನ್ನೂ ಸೃಷ್ಟಿಸುತ್ತಿದೆ. ಆದರೆ ತ್ಯಾಜ್ಯ ನೀರನ್ನು ಕಡಿಮೆ ಮಾಡುವುದಲ್ಲದೆ ಅದನ್ನು ಸುರಕ್ಷಿತವಾಗಿ ಸಂಸ್ಕರಿಸಿ ಮರುಬಳಕೆ ಮಾಡಲು ಅವಕಾಶವಿದೆ. ಈ ಬಗ್ಗೆ ಚಿಂತಿಸಲು ಇದು ಸಕಾಲ.
ಭಾರತದ ಆರ್ಥಿಕತೆ ಕೃಷಿಯನ್ನೇ ದೊಡ್ಡದಾಗಿ ಅವಲಂಬಿಸಿದೆ. ಆದರೆ ನೀರಿನ ಕೊರತೆ ಹಾಗೂ ಪದೇಪದೇ ರಾಷ್ಟ್ರವನ್ನು ಕಾಡುತ್ತಿರುವ ಬರದಿಂದ ಆರ್ಥಿಕ ಪ್ರಗತಿ ಮೇಲಾಗುವ ಪರಿಣಾಮ ದೊಡ್ಡದು. ಇಂತಹ ಸಂದರ್ಭದಲ್ಲಿ ನೀರಿನ ಪೆÇೀಲು ತಡೆಯುವ ಬಗ್ಗೆ ವಿಶೇಷ ಗಮನ ಹರಿಸುವುದು ಅಗತ್ಯ.
ಅದರಲ್ಲೂ ನಗರಗಳಲ್ಲಿ ವಾಸಿಸುವ ಜನರ ಜೀವನಶೈಲಿಯಿಂದ ಆಗುತ್ತಿರುವ ನೀರಿನ ಪೆÇೀಲು ಈಗಾಗಲೇ ನಮಗೆ ದೊಡ್ಡ ಸವಾಲಾಗಿದೆ. ಈ ನಿಟ್ಟಿನಲ್ಲಿ ಜನಜಾಗೃತಿಯಾಗಬೇಕು. ಮುಂದೊದಗಬಹುದಾದ ನೀರಿನ ಸಮಸ್ಯೆಯ ಅಗಾಧತೆಯ ಬಗ್ಗೆ ಅರಿವು ಮೂಡಿಸುವುದು ಇಂದಿನ ತುರ್ತು.
ಈ ನೀರು ಅತಿ ಹೆಚ್ಚು ಉಪ್ಪಿನ ಹಾಗೂ ವಿವಿಧ ರಾಸಾಯನಿಕ ಲವಣಾಂಶಗಳಿಂದ ಕೂಡಿದೆ. ಮನುಷ್ಯ ಹಾಗೂ ಪ್ರಾಣಿಗಳು ನೇರವಾಗಿ ಈ ನೀರು ಕುಡಿದರೆ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ, ಸಾವಿಗೂ ಕಾರಣವಾಗುತ್ತದೆ ಎಂಬುದು ಈಗಾಗಲೇ ಹಲವಾರು ಸಂಶೋಧನೆಗಳಿಂದ ಸಾಬೀತಾಗಿದೆ.
ಹೆಚ್ಚಿನ ಜನರಿಗೆ ಈ ವಿಷಯ ತಿಳಿದಿದೆಯಾದರೂ ಲಭ್ಯವಿರುವ ಅಲ್ಪ ಸ್ವಲ್ಪ ಯೋಗ್ಯ ನೀರನ್ನು ಸಮರ್ಥ ಮತ್ತು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ಹಾಗೂ ಸಂರಕ್ಷಣೆ ಮಾಡುವಲ್ಲಿ ಜನರಿಗೆ ಆಸಕ್ತಿ ಇಲ್ಲದಂತೆ ಕಂಡುಬರುತ್ತಿರುವುದು ವಿಷಾದನೀಯ.
ಮನುಷ್ಯನ ಅತಿಯಾದ ದುರಾಸೆಯಿಂದಾಗಿ ತೀವ್ರಗತಿಯ ಅರಣ್ಯ ನಾಶ, ಮಿತಿಮೀರಿದ ಮಾಲಿನ್ಯ, ಪ್ರಾಕೃತಿಕ ಸಂಪನ್ಮೂಲಗಳ ಅವ್ಯಾಹತ ಬಳಕೆ, ಪರಿಸರದ ಮೇಲೆ ತೋರುತ್ತಿರುವ ಕ್ರೌರ್ಯದಿಂದಾಗಿ ಪ್ರತೀ ಕ್ಷಣ ಹಸಿರು ಮನೆಯ ಪರಿಣಾಮ ಹೆಚ್ಚಾಗುತ್ತ ಸಾಗಿದೆ. ಇದರಿಂದಾಗಿ ಭೂಮಿ ಮೇಲಿನ ತಾಪಮಾನ ದಿನೇ ದಿನೇ ತ್ವರಿತಗತಿಯಲ್ಲಿ ಏರಿಕೆಯಾಗುತ್ತಿದೆ.
ಗಿಡ-ಮರಗಳ ಸಂತತಿ ಕ್ಷೀಣವಾಗಿ ಇಡೀ ಭೂಮಿ ಬಂಜರು ಪ್ರದೇಶವಾಗಿ ಮಾರ್ಪಾಡಾಗುತ್ತಿದೆ. ಇದರಿಂದಾಗಿ ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಗಣನೀಯವಾಗಿ ಕುಸಿಯುತ್ತಿರುವ ಆತಂಕಕಾರಿ ಅಂಶ ಬಯಲಾಗಿದೆ.
ಇದು ತಿಳಿದಿದ್ದರೂ ಕೂಡ ಅದೆಷ್ಟೋ ವಿದ್ಯಾವಂತ ಹಾಗೂ ಅವಿದ್ಯಾವಂತ ಜನರು ಮೂರ್ಖರಂತೆ ವರ್ತಿಸುತ್ತಿದ್ದಾರೆ.
ಇದರೊಂದಿಗೆ, ನಡೆಯುತ್ತಿರುವ ನಗರೀಕರಣ, ವೈಭವೋಪೇತ ಜೀವನ ಶೈಲಿ, ಭೂಮಿತಾಯಿಯ ಒಡಲು ಸೀಳುತ್ತಿರುವ ಗಣಿಗಾರಿಕೆ ಸಾವಿರಾರು ಗಿಡ-ಮರಗಳ ಬುಡಕ್ಕೆ ಕೊಡಲಿ ಪೆಟ್ಟು ನೀಡಿ ಹಸಿರು ನಾಶವಾಗುತ್ತಿದೆ. ಇದರಿಂದಾಗಿ ಪ್ರತೀ ವರ್ಷ ಬಿಸಿಲಿನ ತಾಪ ತ್ವರಿತಗತಿಯಲ್ಲಿ ಏರಿಕೆಯಾಗುತ್ತಿದೆ.
ಮನುಜಕುಲ ಪ್ರಕೃತಿಯಲ್ಲಿ ಹಾಗೂ ಭೂತಾಯಿಯ ಒಡಲಲ್ಲಿ ದೊರೆಯುತ್ತಿರುವ ಜಲಸಂಪನ್ಮೂಲದ ಮೇಲೆ ಸರಿಪಡಿಸಲಾಗದಷ್ಟು ಕ್ರೌರ್ಯ ಮೆರೆದಿದೆ.
ಈ ಅನಾಚಾರವೆಲ್ಲವನ್ನು ಈ ಕ್ಷಣದಿಂದಲೇ ಸಂಪೂರ್ಣವಾಗಿ ನಿಲ್ಲಿಸಿ, ಪ್ರತಿಯೊಬ್ಬರೂ ಗಂಭೀರತೆಯಿಂದ, ಜವಾಬ್ದಾರಿಯಿಂದ ವರ್ತಿಸದಿದ್ದರೆ, ಕೆಲವೇ ದಿನಗಳಲ್ಲಿ ನೀರಿನ ಬೆಲೆ ಪೆಟ್ರೋಲ್, ಡೀಸೆಲ್ ಬೆಲೆಗೆ ಸಮವಾಗುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ.
ಒಂದೊಮ್ಮೆ ಪೆಟ್ರೋಲ್, ಡೀಸೆಲ್ ಸಿಕ್ಕರೂ ಸಿಗಬಹುದು. ಆದರೆ, ಜೀವ ಉಳಿಸಿಕೊಳ್ಳಲು ಯೋಗ್ಯವಾದ ನೀರು ಸಿಗುವುದಕ್ಕೆ ಸಾಧ್ಯವೇ ಇಲ್ಲ. ನಮ್ಮ ತಾತ ಮುತ್ತಾತಂದಿರ ಕಾಲಘಟ್ಟದಲ್ಲಿ ಸಮೃದ್ಧ ಮಳೆಯಿಂದ ದೇಶದ ಪ್ರತಿ ಹಳ್ಳಿಗಳಲ್ಲಿನ ಕೆರೆ-ಕಟ್ಟೆಗಳು, ಜರಿ ತೊರೆಗಳು ತುಂಬಿ ತುಳುಕುತ್ತಿದ್ದವು.
ಅವುಗಳು ಹರಿಯುವ ಕಡೆಗಳೆಲ್ಲ ಹಚ್ಚ ಹಸಿರು ಮೇಳೈಸುತ್ತಿದ್ದವು. ಆ ಪ್ರಕೃತಿ ಸೌಂದರ್ಯ ನೋಡುವುದೇ ಕಣ್ಣಿಗೆ ಹಬ್ಬದಂತಿತ್ತು. ಪೂರ್ವಜನ್ಮದ ಪುಣ್ಯದಂತೆ ಭಾಸವಾಗುತ್ತಿತ್ತು. ಅಂದಿನ ದಿನಗಳಲ್ಲಿ ಮಳೆಗಾಲ ತಿಂಗಳುಗಟ್ಟಲೇ ಇರುತ್ತಿತ್ತು. ಆ ಮಳೆಯಲ್ಲಿ ಹಸಿರನ್ನುಟ್ಟ ಧರೆಯ ಸೊಬಗನ್ನು, ಮೋಡಗಳನ್ನು ಬಾಚಿ ತಬ್ಬಿದ ಬೆಟ್ಟ-ಗುಡ್ಡಗಳ ಸಾಲುಗಳನ್ನು ನೋಡುವುದೇ ಅದೃಷ್ಟವಾಗಿತ್ತು.
ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ಶೇ. 18ರಷ್ಟು ಮಂದಿ ಭಾರತದಲ್ಲಿದ್ದಾರೆ. ಆದರೆ ಜಗತ್ತಿನಲ್ಲಿ ಒಟ್ಟು ಲಭ್ಯವಿರುವ ಜಲ ಸಂಪನ್ಮೂಲಗಳಲ್ಲಿ ಭಾರತ ಹೊಂದಿರುವ ಪಾಲು ಕೇವಲ ಶೇ. 4. ಇದನ್ನು ನಾವು ಅರಿತುಕೊಳ್ಳಬೇಕು.
ಹೀಗಾಗಿ ನೀರಿನ ಪ್ರತಿ ಹನಿಯೂ ಎಷ್ಟು ಮುಖ್ಯ ಎಂಬುದು ಅರಿವಾಗಬೇಕು.
ಭಾರತದ ಬಹು ಭಾಗಗಳಲ್ಲಿ 2040ರೊಳಗೆ ಕುಡಿಯುವ ನೀರಿನ ತೀವ್ರ ಕೊರತೆ ಎದುರಾಗಲಿದೆ ಎಂದು ಇತ್ತೀಚಿನ ಅಧ್ಯಯನ ಹೇಳಿದೆ.
2030 ಹಾಗೂ 2040ರ ನಡುವೆ ವಿಶ್ವದ ಅನೇಕ ಭಾಗಗಳು ನೀರಿನ ಅಭಾವ ಎದುರಿಸಲಿವೆ. ಈ ಪೈಕಿ ಭಾರತವೂ ತೀವ್ರ ಸಂಕಷ್ಟಕ್ಕೆ ಸಿಲುಕಲಿದೆ. ಇದನ್ನು ನಿರ್ವಹಿಸಲು ನಾವು ಸಜ್ಜುಗೊಳ್ಳಬೇಕಿದೆ.
ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಕೈಗಾರಿಕೆಗಳ ತ್ಯಾಜ್ಯ ಹಾಗೂ ವಿಷಯುಕ್ತ ರಾಸಾಯನಿಕ ಪದಾರ್ಥಗಳು ನೀರಿನ ಮೂಲಗಳಿಗೆ ಸೇರದಂತೆ ಕಠಿಣ ಕಾನೂನು ರೂಪಿಸಿ ಜಾರಿಗೆ ಬರುವಂತೆ ಮಾಡುವುದು.
ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಪ್ರತೀ ಮನೆಗಳಲ್ಲಿ ಹಾಗೂ ನೂತನವಾಗಿ ನಿರ್ಮಾಣವಾಗುತ್ತಿರುವ ಕಟ್ಟಡಗಳಲ್ಲಿ ಖಡಾಖಂಡಿತವಾಗಿ ಮಳೆ ಕೊಯ್ಲು ಪದ್ಧತಿಯನ್ನು ತುರ್ತಾಗಿ ಅಳವಡಿಸಿ ಕೊಳ್ಳುವಂತೆ ಅಗತ್ಯ ಅರಿವು ಮೂಡಿಸುವುದು, ಆದೇಶ ಜಾರಿಗೆ ತರುವುದು.
ನೀರನ್ನು ಮಲಿನ ಮಾಡುವ ಹಾಗೂ ನೀರಿಗೆ ವಿಷಯುಕ್ತ ಪದಾರ್ಥಗಳನ್ನು ಬೆರೆಸುವುವರ ವಿರುದ್ಧ ತಪ್ಪಿಸಿಕೊಳ್ಳಲು ಸಾಧ್ಯವೇ ಆಗದಂತೆ ಕಠಿಣ ಕಾನೂನು ಕ್ರಮ ಜರುಗಿಸುವುದು. ಪರಿಸರ ಸ್ನೇಹಿ ಕಟ್ಟಡಗಳನ್ನು ನಿರ್ಮಿಸುವತ್ತ ಆಸಕ್ತಿ ತೋರುವುದು.
ನೀರು ಪೆÇೀಲಾಗದಂತೆ ಸಂಗ್ರಹಿಸಿಟ್ಟುಕೊಳ್ಳಲು ಮೂಲ ಸೌಕರ್ಯಗಳನ್ನು ಮೊದಲು ಅಭಿವೃದ್ಧಿಪಡಿಸಬೇಕು. ಇದಕ್ಕೆ ತಂತ್ರಜ್ಞಾನವನ್ನು, ಲಭ್ಯವಿರುವ ಸ್ಥಳೀಯ ಮಾದರಿಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು.
ನೀರಿದ್ದರೆ ಮಾತ್ರವೇ ನಮ್ಮೆಲ್ಲರ ಉಳಿವು. ನೀರಿಲ್ಲವಾದರೆ ನಮ್ಮೆಲ್ಲರ ಶಾಶ್ವತ ಅಳಿವು ಶತಸಿದ್ಧ ಎಂಬುದನ್ನು ಎಲ್ಲರೂ ನೆನಪಿಡಿ. ಅಮೃತ ಸಮಾನವಾದ ನೀರನ್ನು ನಾವು ಮಾತ್ರವಲ್ಲದೆ, ನಮ್ಮ ಮುಂದಿನ ಜನಾಂಗಕ್ಕೂ ಕೂಡ ಜತನದಿಂದ ಉಳಿಸೋಣ.

