ಸರ್ಕಾರ ಬೀಳಿಸಿ ಬಾಂಬೆಗೆ ಹೋಗಿದ್ದೇ ಸಿಡಿ ಆಗಲು ಕಾರಣ -ಹೆಚ್.ಡಿ.ಕೆ.

ಬೆಂಗಳೂರು: ಸರ್ಕಾರ ಬೀಳಿಸಿ ಬಾಂಬೆಗೆ ಹೋಗಿದ್ದೇ ಸಿಡಿ ಆಗಲು ಕಾರಣ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ಹೆಚ್‍ಡಿಕೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸೋಮವಾರ ಮಾತನಾಡಿದರು.
ಸಮ್ಮಿಶ್ರ ಸರ್ಕಾರ ಬೀಳಿಸಿದ ಬಗ್ಗೆ ಎಚ್.ವಿಶ್ವನಾಥ್ ಅಸಮಾಧಾನಗೊಂಡ ಕುರಿತು ಪ್ರತಿಕ್ರಿಯಿಸಿದ ಅವರು, ವಿಶ್ವನಾಥ್ ಮಾತ್ರವಲ್ಲ, ಮಂತ್ರಿ ಆಗಿರುವವರೇ, ಆಂತರಿಕವಾಗಿ ಕೇಳಿದರೆ ಸರ್ಕಾರ ಮಾಡಿದ್ದು ಸರಿಯಲ್ಲ ಎಂದು ಹೇಳುತ್ತಾರೆ ಎಂದರು.
ಸಿ.ಡಿ ವಿಚಾರದ ತನಿಖೆಯನ್ನು ಎಸಿಬಿ, ಎಸ್‍ಐಟಿ, ಸರ್ಕಾರ ನೋಡಿಕೊಳ್ಳಲಿದೆ. ಯಾವ್ಯಾವ ಅಧಿಕಾರಿಯನ್ನು ಬೇಕು ಕರೆಸಿಕೊಂಡು ಮಾಹಿತಿ ಪಡೆಯಲಿ. ಆದರೆ ಸರ್ಕಾರ ಬೀಳಿಸಿ ಬಾಂಬೆಗೆ ಹೋಗಿದ್ದೇ ಸಿ.ಡಿ ಆಗಲು ಕಾರಣ ಎಂದರು.
ಮಸ್ಕಿ ಅಭಿವೃದ್ಧಿಗೆ ಬಿಜೆಪಿಗೆ ಅಧಿಕಾರ ಕೊಡಿ ಎಂದು ಕೇಳಿರುವ ವಿಚಾರವಾಗಿ ಮಾತನಾಡಿದ ಅವರು, ಈಗಾಗಲೇ ಅಧಿಕಾರಕ್ಕೆ ಬಂದು ಎರಡು ವರ್ಷ ಆಗಿದೆ. ಇವರೇ ತಾನೆ ಎರಡು ವರ್ಷದಿಂದ ಅಧಿಕಾರ ನಡೆಸುತ್ತಿರುವುದು. ನಾನು ಅಧಿಕಾರದಲ್ಲಿದ್ದಾಗ 500 ಕೋಟಿ ರೂ.ಗೂ ಹೆಚ್ಚಿನ ಅನುದಾನ ನೀಡಿದ್ದೆ. ಎರಡು ವರ್ಷದಲ್ಲಿ ಕೆಲಸ ಮಾಡಿಸಿದ್ದೇನೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.
ಮಸ್ಕಿ ಬಿಜೆಪಿ ಅಭ್ಯರ್ಥಿ ಅಧಿಕಾರ ತ್ಯಾಗ ವಿಚಾರದ ಬಗ್ಗೆ ಮಾತನಾಡಿದ ಅವರು, ಜನಕ್ಕೆ ತ್ಯಾಗ ಮಾಡಿಲ್ಲ, ಬಿಜೆಪಿ ಅಧಿಕಾರಕ್ಕೆ ಬರಲು ತ್ಯಾಗ ಮಾಡಿದ್ದಾರೆ ಎಂದರು.