225 ಜನಪ್ರತಿನಿಧಿಗಳ ಬಗ್ಗೆಯೂ ತನಿಖೆಯಾಗಲಿ -ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು: 225 ಜನಪ್ರತಿನಿಧಿಗಳ ಬಗ್ಗೆಯೂ ತನಿಖೆಯಾಗಲಿ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಸವಾಲು ಹಾಕಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಡಾ. ಸುಧಾಕರ್ ಮಾತನಾಡಿದರು.
ಈವರೆಗೂ ಮುಖ್ಯಮಂತ್ರಿಯಿಂದ ಹಿಡಿದು ಸಚಿವರಾಗಿ, ಶಾಸಕರಾಗಿ ಆಡಳಿತ ನಡೆಸಿದವರು ತಮ್ಮ ಜೀವನದಲ್ಲಿ ಯಾವುದೇ ರೀತಿಯ ಅನೈತಿಕ ವ್ಯವಹಾರ ನಡೆಸಿಲ್ಲ ಎಂಬುದನ್ನು ಮೊದಲು ಸಾಬೀತು ಪಡಿಸಲಿ ಎಂದು ಸುಧಾಕರ್ ಸವಾಲು ಹಾಕಿದರು.
ಕೆಲ ಮಾಜಿ ಮುಖ್ಯಮಂತ್ರಿಗಳು ತಮ್ಮ ವೈಯಕ್ತಿಕ ಜೀವನದಲ್ಲಿ ಏನೇನು ಮಾಡಿದ್ದರು ಎಂದು ಎಲ್ಲವೂ ತನಿಖೆಯಾಗಲಿ, ನೈತಿಕತೆ, ಮೌಲ್ಯಗಳ ಪ್ರಶ್ನೆ ಬಗ್ಗೆ ಮಾತನಾಡುತ್ತಾರೆ, ಅವರಿಗೆ ನೈತಿಕತೆ ಬಗ್ಗೆ ಮಾತನಾಡಲು ಎಷ್ಟು ಹಕ್ಕಿದೆ ಎಂದು ಪ್ರಶ್ನಿಸಿದ್ದಾರೆ.
ವಿಧಾನಸಭೆಯಲ್ಲಿರುವ ಯಾರ್ಯಾರು ಏನು ಮಾಡಿದ್ದಾರೆಂಬುದು ಜನರಿಗೆ ಗೊತ್ತಾಗಲಿ. ಇವರೆಲ್ಲ ಸತ್ಯ ಹರಿಶ್ಚಂದ್ರರಂತೆ ಈಗ ಮಾತನಾಡುತ್ತಿದ್ದಾರೆ. ತನಿಖೆ ನಡೆದರೆ ಎಲ್ಲವೂ ಗೊತ್ತಾಗಲಿದೆ ಎಂದರು.
ಯಾರು ಇವತ್ತು ಮರ್ಯಾದಾ ಪುರುಷರು, ಶ್ರೀರಾಮಚಂದ್ರನಂತವರು ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಮಾತನಾಡುತ್ತಿದ್ದಾರೋ ಅವರಿಗೆ ಸವಾಲು ಹಾಕುತ್ತೇನೆ, ನನ್ನನ್ನು ಸೇರಿಸಿ ಎಲ್ಲಾ ಶಾಸಕರು ತನಿಖೆ ಎದುರಿಸಲಿ, ಯಾರ್ಯಾರು ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ತನಿಖೆಯಿಂದ ಹೊರಬರಲಿ, ಆಗ ಗೊತ್ತಾಗುತ್ತದೆ ಯಾರ್ಯಾ ಚರಿತ್ರೆ ಏನು ಎಂದು ವಿರೋಧ ಪಕ್ಷದ ನಾಯಕರಿಗೆ ಸಚಿವ ಸುಧಾಕರ್ ಹೇಳಿದರು.
ಕಾಂಗ್ರೆಸ್‍ಗೆ ಮಾಡಲು ಕೆಲಸವಿಲ್ಲ. ವೈಯಕ್ತಿಕ ಅಜೆಂಡಾಗಳನ್ನಿಟ್ಟುಕೊಂಡು ಸದನಕ್ಕೆ ಅಡ್ಡಿಪಡಿಸುತ್ತಿದೆ. ಈಗಾಗಲೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣವನ್ನು ಎಸ್‍ಐಟಿಗೆ ವಹಿಸಲಾಗಿದೆ. ನ್ಯಾಯಾಂಗದ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲದವರು ಈ ರೀತಿ ಮಾತನಾಡುತ್ತಿದ್ದಾರೆ ಎಂದು ಸುಧಾಕರ್ ತಿಳಿಸಿದರು.