ಹೊಸೂರು: ನನಗೂ ಸಿಡಿ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಕಾನೂನು ಪ್ರಕಾರ ತನಿಖೆ ಮಾಡಲಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಹೇಳಿದರು. ಸಿಡಿ ಪ್ರಕರಣದಲ್ಲಿ ಯುವತಿಯನ್ನು ಬಳಸಿಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂಬ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಸಂತ್ರಸ್ತ ಯುವತಿ ಪೋಷಕರ ಆರೋಪ ಸಂಬಂಧ ಹೊಸೂರಿನಲ್ಲಿ ಮಾಧ್ಯಮದವರು ಶನಿವಾರ ಸಂಜೆ ಕೇಳಿದ ಪ್ರಶ್ನೆಗಳಿಗೆ ಡಿಕೆಶಿ ಅವರು ಪ್ರತಿಕ್ರಿಯೆ ನೀಡಿದರು. ಪಾಪ, ಅವರು ಹತಾಶರಾಗಿದ್ದಾರೆ, ಬೇಸರದಲ್ಲಿದ್ದಾರೆ. ಅವರಿಗೆ ಅವರ ಸಮಸ್ಯೆ ಇದೆ. ಹೀಗಾಗಿ ಮಾತನಾಡುತ್ತಾರೆ. ಅವರಿಗೆ ಉತ್ತರ ಕೊಡಲು ಹೋಗುವುದಿಲ್ಲ ಎಂದರು. ಕಾನೂನಿದೆ, ಪೊಲೀಸ್ ಅಧಿಕಾರಿಗಳಿದ್ದಾರೆ. ತನಿಖೆ ನಡೆಯುತ್ತಿದೆ. ಎಲ್ಲ ವಿಚಾರಣೆ ಮುಗಿಯಲಿ ಎಂದವರು ಹೇಳಿದರು. ನನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ಇದು ಅವರ ವೈಯಕ್ತಿಕ ಸಮಸ್ಯೆ. ಅವರೇ ಇದನ್ನು ಬಗೆಹರಿಸಿಕೊಳ್ಳಬೇಕು ಎಂದು ಡಿಕೆಶಿ ತಿಳಿಸಿದರು. ಅವಕ್ಕೆಲ್ಲ ಉತ್ತರ ಕೊಟ್ಟುಕೊಂಡು ಕೂರಲು ನಾನು ತಯಾರಿಲ್ಲ. ನನಗೆ ಅದರ ಅವಶ್ಯಕತೆಯೂ ಇಲ್ಲ. ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ಅವರದೇ ಸರ್ಕಾರ ಇದೆ. ಕಾನೂನು ಪ್ರಕಾರ ತನಿಖೆ ಮಾಡಲಿ. ತಪ್ಪು ಮಾಡಿರುವವರಿಗೆ ಶಿಕ್ಷೆ ನೀಡಲಿ ಎಂದು ಅವರು ಹೇಳಿದರು. ನಾನು ಸಂತ್ರಸ್ತ ಯುವತಿಯನ್ನು ಭೇಟಿ ಮಾಡಿಲ್ಲ. ನನ್ನ ಬಳಿ ಯಾರೂ ಬಂದಿಲ್ಲ ಎಂದು ಶಿವಕುಮಾರ್ ತಿಳಿಸಿದರು.
ನನಗೂ ಸಿಡಿ ಪ್ರಕರಣಕ್ಕೂ ಸಂಬಂಧವಿಲ್ಲ -ಡಿ.ಕೆ ಶಿವಕುಮಾರ್

