ನನಗೆ ಪ್ರತಿಭಟನೆಯ ಸ್ವಾಗತ ಕೋರಿದವರಿಗೆ ಅಭಿನಂದನೆಗಳು -ಡಿ.ಕೆ.ಶಿ

ಬೆಳಗಾವಿ: ಪ್ರತಿಭಟನೆ ಮೂಲಕ ನನಗೆ ಸ್ವಾಗತ ಮಾಡುತ್ತಿರುವುದಕ್ಕೆ ಬಹಳ ಸಂತೋಷವಾಗುತ್ತಿದೆ. ಅವರ ಸ್ವಾಗತ, ಪ್ರೀತಿ ವಿಶ್ವಾಸಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಈ ಸ್ವಾಗತವೇ ನಮಗೆ ದೊಡ್ಡ ಶಕ್ತಿಯಾಗುತ್ತದೆ. ಅವರು ಎಂತೆಂಥಾ ಘನಕಾರ್ಯಕ್ಕೆ ಈ ಸ್ವಾಗತ ಮಾಡುತ್ತಿದ್ದಾರೆ ಗೊತ್ತಾ..?! ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಲೇವಡಿ ಮಾಡಿದ್ದಾರೆ.
ಬೆಳಗಾವಿ ಲೋಕಸಭೆ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ಇಲ್ಲಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಶಿವಕುಮಾರ್ ಅವರು ಮಾಧ್ಯಮಗಳ ಜತೆ ಮಾತನಾಡಿದರು.
ಬೆಳಗಾವಿ ಉಪಚುನಾವಣೆ ಬರಬಾರದಿತ್ತು. ಆಕಸ್ಮಿಕವಾಗಿ ಬಂದಿದೆ. ಸುರೇಶ್ ಅಂಗಡಿ ಅವರ ಅಕಾಲಿಕ ಮರಣ ಈ ಚುನಾವಣೆ ತಂದಿದೆ. ಚುನಾವಣೆ ಬಹಳ ನಿಧಾನವಾಗಿದೆ. ಕಾಂಗ್ರೆಸ್ ಇಡೀ ಕ್ಷೇತ್ರದಲ್ಲಿ ಒಗ್ಗಟ್ಟು ಪ್ರದರ್ಶನ ಮಾಡುತ್ತಿದೆ. ಶ್ರೀಮತಿ ಸೋನಿಯಾ ಗಾಂಧಿ ಅವರು, ರಾಹುಲ್ ಗಾಂಧಿ ಅವರು, ವಿರೋಧ ಪಕ್ಷದ ನಾಯಕರು, ನಾನು, ಎಂ.ಬಿ ಪಾಟೀಲರು, ರಾಮಲಿಂಗಾ ರೆಡ್ಡಿ ಅವರು, ದೇಶಪಾಂಡೆ ಅವರು ಸೇರಿದಂತೆ ಈ ಭಾಗದ ಎಲ್ಲ ನಾಯಕರು ಸೇರಿ ಒಬ್ಬರೇ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರ ಹೆಸರು ಸೂಚಿಸಿದ್ದೇವೆ. ನಾಳೆ ಹನ್ನೊಂದು ಗಂಟೆಗೆ ಅವರು ನಾಮ ಪತ್ರ ಸಲ್ಲಿಸುತ್ತಾರೆ. ಅದಕ್ಕೆ ನಾವು ಬಂದಿದ್ದೇವೆ ಎಂದರು ಡಿಕೆಶಿ.
ಉತ್ತಮ ಜನ ಬೆಂಬಲ, ಜನರ ಸೇವೆ, ಯುವಕರ ಬಗ್ಗೆ ಕಾಳಜಿ, ಎಲ್ಲ ವರ್ಗದ ಜತೆ ಹೊಂದಿಕೊಂಡು ಬಾಳುವ ಸೌಮ್ಯ, ಸಜ್ಜನ ಅಭ್ಯರ್ಥಿಯನ್ನು ಕಾಂಗ್ರೆಸ್ ಪಕ್ಷ ಕೊಟ್ಟಿದೆ. ಸತೀಶ್ ಅವರನ್ನು ಸಂಸತ್ತಿಗೆ ಕಳುಹಿಸಬೇಕು ಅಂತಾ ಇಡೀ ನಮ್ಮ ಬೆಳಗಾವಿಯ ಜನ ಒಕ್ಕೊರಲಿನಿಂದ ಆಶೀರ್ವಾದ ಮಾಡುತ್ತಿದ್ದಾರೆ. ಅವರಿಗೆ ಬೆಂಬಲವಾಗಿ ನಿಂತಿದ್ದಾರೆಂದರು.
ನಾವೆಲ್ಲರೂ ಸೇರಿ ಅವರಿಗೆ ಶಕ್ತಿ ನೀಡಬೇಕು. ಕರ್ನಾಟಕದಿಂದ 25 ಮಂದಿ ಬಿಜೆಪಿಯವರು ಸಂಸತ್ತಿಗೆ ಹೋಗಿದ್ದರೂ ಒಂದು ದಿನವೂ ಅವರು ರಾಜ್ಯದ ಪರ ಧ್ವನಿ ಎತ್ತಿಲ್ಲ. ಹೀಗಾಗಿ ರಾಜ್ಯದಿಂದ ಕಾಂಗ್ರೆಸ್ ನ ಎರಡನೇ ಸಂಸದರಾಗಿ ಸತೀಶ್ ಆಯ್ಕೆಯಾಗುತ್ತಾರೆ ಎಂಬ ಆತ್ಮವಿಶ್ವಾಸದಿಂದ ಚುನಾವಣೆ ಎದುರಿಸುತ್ತಿದ್ದೇವೆ ಎಂದು ಡಿಕೆಶಿ ಹೇಳಿದರು.
ಬೆಳಗಾವಿಯಲ್ಲಿ ತಮ್ಮ ಬೆಂಬಲಿಗರ ಕಾರಿನ ಮೇಲೆ ಚಪ್ಪಲಿ, ಕಲ್ಲು ತೂರಾಟ, ಗಲಾಟೆ ಹಾಗೂ ಅದಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, ಅವರು ಜವಾಬ್ದಾರಿಯುತ ಗೃಹ ಸಚಿವರಾಗಿ ಏನು ಹೇಳಬೇಕೋ ಅದನ್ನು ಹೇಳಿದ್ದಾರೆ. ರಾಜಕೀಯದಲ್ಲಿ ಇದೆಲ್ಲಾ ಸಹಜ ಎಂದರು.
ನಮಗೆ ಹೂವಿನ ಹಾರ ಹಾಕುವವರು ಇರ್ತಾರೆ, ಜೈಕಾರ ಹಾಕುವವರೂ ಇರ್ತಾರೆ, ಧಿಕ್ಕಾರ ಹಾಕುವವರೂ ಇರ್ತಾರೆ, ಕಲ್ಲು ಹೊಡೆಯುವವರೂ ಇರ್ತಾರೆ. ಹಿಂದೆ ಮೊಟ್ಟೆ ಎಸೆಯುತ್ತಿದ್ದರು ಎಂದು ಡಿಕೆಶಿ ಮಾರ್ಮಿಕವಾಗಿ ನುಡಿದರು.
ಈಗ ಕೆಲವರು ದೊಡ್ಡ, ದೊಡ್ಡ ಸಾಧನೆ ಮಾಡಿದ್ದಾರಲ್ಲಾ ಅದಕ್ಕೆ ಹೀಗೆಲ್ಲಾ ಮಾಡ್ತಾರೆ. ಏನಾಯ್ತೋ, ಬಿಟ್ಟಿತೊ ನಾನು ಎಲ್ಲವನ್ನೂ ಕ್ರೀಡಾಸ್ಫೂರ್ತಿಯಿಂದ ತೆಗೆದುಕೊಳ್ಳುತ್ತೇನೆಂದರು.
ಕ್ಷೇತ್ರದ, ರಾಜ್ಯದ ಮಹಾಜನತೆ ನೋಡುತ್ತಿದ್ದಾರೆ. ಚುನಾವಣೆಯನ್ನು ಶಾಂತ ರೀತಿಯಲ್ಲಿ ನಾವು ನಡೆಸುತ್ತೇವೆ. ಆದರೆ ಬಿಜೆಪಿಯವರು ಎಂತೆಂತಹಾ ಮುತ್ತು ರತ್ನಗಳನ್ನು ಇಟ್ಟುಕೊಂಡಿದ್ದಾರೆ ಎಂಬುದನ್ನು ನೋಡಿ ಬಹಳ ಸಂತೋಷವಾಗುತ್ತಿದೆ ಎಂದರು.