ಕೋಲಾರ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎರಡು ವಿಧಾನಸಭೆ ಕ್ಷೇತ್ರಗಳಲ್ಲಿ ಸ್ಫರ್ಧಿಸಿ ಬಾದಾಮಿಯಲ್ಲಿ ಗೆಲುವು ಕಂಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ ಚುನಾವಣೆಗೆ ಕ್ಷೇತ್ರ ಬದಲಿಸುತ್ತಾರಾ?
ಹೀಗೊಂದು ಪ್ರಶ್ನೆ ಈಗ ಎದ್ದಿದೆ. ಕೆಲ ದಿನಗಳ ಹಿಂದೆಯಷ್ಟೇ ಬೆಂಗಳೂರಿನ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಹೇಳಿಕೆ ನೀಡಿ, ಸಿದ್ದರಾಮಯ್ಯ ಸ್ಪರ್ಧೆ ಮಾಡುವುದಾದರೆ ಕ್ಷೇತ್ರ ಬಿಟ್ಟುಕೊಡಲು ರೆಡಿ ಎಂದು ಘೋಷಣೆ ಮಾಡಿದ್ದರು.
ಅದರ ಬೆನ್ನಲ್ಲೇ ಈಗ ಸಿದ್ದರಾಮಯ್ಯ ಅವರು ಮುಂದಿನ ಚುನಾವಣೆಗೆ ಕೋಲಾರದಿಂದ ಕಣಕ್ಕಿಳಿಯಲಿದ್ದಾರೆ ಎಂದು ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದ್ದಾರೆ.
ಸಿದ್ದರಾಮಯ್ಯ ಅವರ ಹೆಸರೇಳಿಕೊಂಡೇ ವರ್ತೂರಿನಿಂದ ಕೋಲಾರಕ್ಕೆ ಬಂದು ಶಾಸಕರಾಗಿದ್ದ ವರ್ತೂರು ಪ್ರಕಾಶ್ ಒಂದು ಕಾಲದಲ್ಲಿ ಸಿದ್ದುಗೆ ಖಾಸಾ ಶಿಷ್ಯರಾಗಿದ್ದವರು. ಈಗ ಮಾಜಿ ಶಿಷ್ಯನ ಕ್ಷೇತ್ರದಿಂದಲೇ (ವರ್ತೂರು ಈಗ ಸೋತಿದ್ದಾರೆ) ಸ್ಪರ್ಧಿಸಲಿದ್ದಾರೆ ಎಂದು ನಾರಾಯಣಸ್ವಾಮಿ ಹೇಳಿರುವುದು ಎಲ್ಲರ ಹುಬ್ಬೇರಿಸಿದೆ.
ಕೋಲಾರದಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ನಾರಾಯಣಸ್ವಾಮಿ ಮಾತನಾಡಿದರು.
ಕೋಲಾರ ಜಿಲ್ಲೆಗೆ ಕೆ.ಸಿ.ವ್ಯಾಲಿ ನೀರು ಹರಿದುಬರಲು ಸಿದ್ದರಾಮಯ್ಯ ಅವರೇ ಕಾರಣ. ಕೋಲಾರ ಕ್ಷೇತ್ರಕ್ಕೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಅವರೇ ಕಣಕ್ಕೆ ಇಳಿಯಲಿದ್ದಾರೆ. ಅವರನ್ನು ನಾವೆಲ್ಲರೂ ಸೇರಿ ಗೆಲ್ಲಿಸುತ್ತೇವೆ. ಅವರು ಇಲ್ಲಿಂದ ಶಾಸಕರಾಗಿ ಗೆದ್ದರೆ ಜಿಲ್ಲೆಯ ಸಮಗ್ರ ಅಭಿವೃದ್ಧಿಯಾಗುತ್ತದೆ ಎಂದರು.
ಜಿಲ್ಲೆಯಲ್ಲಿ ಪಕ್ಷ ಬಲಿಷ್ಠವಾಗಿದೆ. ನಾನು, ಮಾಲೂರು ಶಾಸಕ ನಂಜೇಗೌಡ, ಶ್ರೀನಿವಾಸಪುರದ ರಮೇಶ್ ಕುಮಾರ್, ವಿಧಾನಪರಿಷತ್ ಸದಸ್ಯ ನಜೀರ್ ಅಹಮದ್ ಎಲ್ಲರೂ ಸೇರಿ ಸಿದ್ದರಾಮಯ್ಯ ಅವರನ್ನು ಗೆಲ್ಲಿಸುತ್ತೇವೆ. ನಾವೆಲ್ಲರೂ ಇಲ್ಲಿಂದಲೇ ಸ್ಫರ್ಧೆ ಮಾಡುವಂತೆ ಸಿದ್ದರಾಮಯ್ಯ ಅವರನ್ನು ಒತ್ತಾಯ ಮಾಡಲಿದ್ದೇವೆ. ಇನ್ನೊಂದೆಡರಡು ತಿಂಗಳಲ್ಲಿ ಅಂತಿಮ ಚಿತ್ರಣ ಸಿಗಲಿದೆ ಎಂದವರು ತಿಳಿಸಿದರು.
ವರ್ತೂರು ಪ್ರಕಾಶ್ ಹೇಳುವುದನ್ನು ನಂಬಬೇಡಿ. ಅವರು ಕಾಂಗ್ರೆಸ್ ಪಕ್ಷದ ಸದಸ್ಯರಲ್ಲ. ಅವರು ಕಾಂಗ್ರೆಸ್ ಸೇರುವುದೂ ಸಾಧ್ಯವಿಲ್ಲ. ಅವರು ಸ್ಫರ್ಧಿಸುತ್ತಾರೆ? ಇವರು ಸ್ಫರ್ಧಿಸುತ್ತಾರೆ? ಎಂದು ಹೇಳಲು ಅವರು ಯಾರು? ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಸ್ಫರ್ಧೆ ಮಾಡುತ್ತಾರೆ ಎಂದು ಹೇಳಲು ಅವರು ಯಾರು? ಎಂದರು.
ಕೆಲವರು ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡುವ ಕನಸು ಕಾಣುತ್ತಿದ್ದಾರೆ. ಅದು ಕನಸಾಗಿಯೇ ಉಳಿಯುತ್ತದೆ ಎಂದರು ನಾರಾಯಣಸ್ವಾಮಿ.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ? ಗುಟ್ಟು ಬಿಚ್ಚಿಟ್ಟ ಶಾಸಕ ನಾರಾಯಣಸ್ವಾಮಿ

