ಈಶ್ವರಪ್ಪ ಯಾರಿಗೆ ನಿಷ್ಠರಾಗಿದ್ದಾರೆ -ಡಿಕೆಶಿ ಪ್ರಶ್ನೆ

ಬೆಂಗಳೂರು: ಸಚಿವ ಈಶ್ವರಪ್ಪ ಅವರು ಯಾರಿಗೆ ನಿಷ್ಠರಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.
ಡಿಕೆಶಿವಕುಮಾರ್ ಅವರು ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಸಚಿವ ಈಶ್ವರಪ್ಪ ಅವರು ಪಕ್ಷಕ್ಕೆ ನಿಷ್ಠರಾಗಿರಬಹುದು. ಆದರೆ ಮುಖ್ಯಮಂತ್ರಿಯವರಿಗಲ್ಲ ಎಂದರು.
ಈಶ್ವರಪ್ಪ ಅವರನ್ನು ಮಂತ್ರಿ ಮಾಡಿದ್ದು ಮುಖ್ಯಮಂತ್ರಿ ಯಡಿಯೂರಪ್ಪ. ಸಚಿವರಾಗಿ ಅವರು ನಿಷ್ಠರಾಗಿರಬೇಕಾಗಿದ್ದು ಯಡಿಯೂರಪ್ಪ ಅವರಿಗೆ. ಆದರೆ ಅವರ ವಿರುದ್ಧವೇ ಪತ್ರ ಬರೆದಿದ್ದಾರೆ. ಹಾಗಿದ್ದರೆ ಅವರ ನಿಷ್ಠೆ ಯಾರಿಗೆ ಎಂದು ಪ್ರಶ್ನಿಸಿದರು.
ರಾಜ್ಯಪಾಲರಿಗೆ ಪತ್ರ ಬರೆದ ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾ ಮಾಡದೆ ಮುಖ್ಯಮಂತ್ರಿಯವರು ತಮ್ಮ ತಪ್ಪನ್ನು ತಾವೇ ಒಪ್ಪಿಕೊಂಡು ಸುಮ್ಮನೆ ಕುಳಿತುಕೊಂಡಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಈಶ್ವರಪ್ಪ ಅವರು ಯಡಿಯೂರಪ್ಪ ವಿರುದ್ಧ ವಿವಿಧ ಸೆಕ್ಷನ್ ಗಳನ್ನು ಉಲ್ಲೇಖ ಮಾಡಿ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಇಂದು ಈಶ್ವರಪ್ಪನವರು ಮಾತನಾಡಿ, ನಾನು ಬಂಡಾಯವೆದ್ದಿಲ್ಲ. ನಿಷ್ಠನಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಅವರು ಯಾರಿಗೆ ನಿಷ್ಠರಾಗಿದ್ದಾರೆ ಎಂಬ ಪ್ರಶ್ನೆ ಉದ್ಭವಿಸಿದೆ ಎಂದು ಡಿಕೆಶಿ ಹೇಳಿದರು.
ಸಿಡಿ ಪ್ರಕರಣದಲ್ಲಿ ಹಣಕಾಸಿನ ವಹಿವಾಟು ನಡೆದಿದ್ದು, ಈ ಕುರಿತು ಜಾರಿ ನಿರ್ದೇಶನಾಲಯದ ತನಿಖೆ ನಡೆಸುವಂತೆ ಬರೆದಿರುವ ಪತ್ರದ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿ ಅವರು ಮೊದಲು ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕರು ಆಪರೇಷನ್ ಕಮಲಕ್ಕಾಗಿ ತಮಗೆ ಹಣ ನೀಡಿದ ಬಗ್ಗೆ ಹೇಳಿಕೆ ನೀಡಿದ್ದಾರೆ. ಅದರ ಬಗ್ಗೆ ಮೊದಲು ತನಿಖೆಯಾಗಲಿ. ನಂತರ ಉಳಿದ ವಿಚಾರ ಕುರಿತು ಮಾತನಾಡೋಣ ಎಂದರು.