ಬೆಂಗಳೂರು: ಕೋವಿಡ್ ಸೋಂಕು ತಡೆಗಟ್ಟಲು ಹಾಗೂ ಹೆಚ್ಚಿನವರಿಗೆ ಲಸಿಕೆ ನೀಡಲು ಉದ್ಯೋಗಸ್ಥರಿರುವಲ್ಲಿಗೇ ಹೋಗಿ ಲಸಿಕೆ ನೀಡಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಇದಕ್ಕೆ ರಾಜ್ಯದಲ್ಲೂ ವ್ಯವಸ್ಥೆ ಮಾಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಕೋವಿಡ್ ನಿಯಂತ್ರಣ ಸಂಬಂಧ ಬೀದರ್, ಬೆಳಗಾವಿ, ವಿಜಯಪುರ, ಕಲಬುರ್ಗಿ, ತುಮಕೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಹಾಸನ, ಮಂಡ್ಯ, ಮೈಸೂರು ಹಾಗೂ ಚಿತ್ರದುರ್ಗ ಜಿಲ್ಲೆಗಳ ಜಿಲ್ಲಾಡಳಿತಗಳೊಂದಿಗೆ ಸಚಿವರು ವೀಡಿಯೋ ಸಭೆ ನಡೆಸಿದರು.
ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಕೇಂದ್ರ ಸರ್ಕಾರ ಉದ್ಯೋಗಸ್ಥರಿಗೆ, ಅರ್ಹರಿಗೆ ಅದೇ ಸ್ಥಳಗಳಲ್ಲಿ ಹೋಗಿ ಲಸಿಕೆ ನೀಡುವ ಅವಕಾಶ ಕೊಟ್ಟಿದೆ. ಈ ಕುರಿತು ದೊಡ್ಡ ಉದ್ಯಮಗಳು, ಐಟಿ ಉದ್ಯಮಗಳು ಮನವಿ ಮಾಡಿದ್ದವು. ಅದಕ್ಕೆ ಕೇಂದ್ರದಿಂದ ಮಂಜೂರಾತಿ ಸಿಕ್ಕಿದೆ ಎಂದರು.
ಏ. 11ರಿಂದ ಅವರಿರುವ ಸ್ಥಳದಲ್ಲೇ ಲಸಿಕೆ ನೀಡುವ ವ್ಯವಸ್ಥೆಯಾಗಲಿದೆ. ಇದರಿಂದಾಗಿ ಲಸಿಕೆ ಪಡೆಯುವವರ ಸಂಖ್ಯೆ ಹೆಚ್ಚಲಿದೆ. ಈವರೆಗೆ 50 ಲಕ್ಷ ಡೋಸ್ ತಲುಪಲಾಗಿದೆ. ಆದಷ್ಟು ಶೀಘ್ರ ಇನ್ನಷ್ಟು 50 ಲಕ್ಷವಾಗಿ, ಒಂದು ಕೋಟಿ ತಲುಪಲಿದೆ ಎಂದರು.
ಕಳೆದೆರಡು ವಾರ ಗಮನಿಸಿದಾಗ ಕೆಲ ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಹೆಚ್ಚಾಗುತ್ತಾ ಹೋಗಿದೆ. ಕೆಲವು ಕಡೆ ಕೋವಿಡ್ ಪರೀಕ್ಷೆ ಕಡಿಮೆಯಾಗಿದೆ. ಸಾರಿ ಹಾಗೂ ಐಎಲ್ ಐ ಪ್ರಕರಣ ಪತ್ತೆ ಕಡಿಮೆ ಹಾಗೂ ಲಸಿಕೆ ಮೊದಲಾದ ವಿಷಯ ಕುರಿತು ಚರ್ಚಿಸಲಾಗಿದೆ. ಕೇಂದ್ರ ಆರೋಗ್ಯ ಸಚಿವರು ನೀಡಿದ ಮಾರ್ಗದರ್ಶನವನ್ನು ಈ ಜಿಲ್ಲೆಗಳಿಗೆ ತಿಳಿಸಲಾಗಿದೆ. ಎಲ್ಲರೂ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜನಸಾಮಾನ್ಯರು ಸ್ವಯಂ ನಿಯಮ ಹಾಕಿಕೊಳ್ಳಬೇಕು ಎಂದರು.
ಜನರು ನಡವಳಿಕೆಗಳಲ್ಲಿ ಬದಲಾವಣೆ ಮಾಡಿಕೊಂಡು ಸರ್ಕಾರಕ್ಕೆ ಸಹಕಾರ ನೀಡಬೇಕು. ಎರಡನೇ ಅಲೆ ನಿರೀಕ್ಷೆಗೆ ಮೀರಿ ಹರಡುತ್ತಿದೆ. ಸೋಂಕು ಹೆಚ್ಚಾದರೆ ಹಾಸಿಗೆ ಲಭ್ಯತೆ ಕಷ್ಟವಾಗುತ್ತದೆ ಎಂದರು.
ಕಳೆದೊಂದು ವರ್ಷದಿಂದ ಎಲ್ಲ ಸಿದ್ಧತೆ ಮಾಡಿಕೊಂಡಿರುವುದರಿಂದ ಅಂತಹ ಸಮಸ್ಯೆ ಇಲ್ಲ. ಆದರೆ ಇದೇ ರೀತಿ 6%, 9% ಪಾಸಿಟಿವಿಟಿ ದರ ಬಂದರೆ ಅಥವಾ 20%, 25% ಬಂದರೆ ಎಷ್ಟು ಜನ ಐಸಿಯುಗೆ ಹೋಗಬೇಕಾಗುತ್ತದೆ ಎಂದು ಯೋಚಿಸಬೇಕಾಗುತ್ತದೆ ಎಂದು ತಿಳಿಸಿದರು.
ಉದ್ಯೋಗಸ್ಥರಿಗೆ ಅವರಿರುವ ಸ್ಥಳದಲ್ಲೇ ಲಸಿಕೆ ನೀಡಲು ಅವಕಾಶ -ಸಚಿವ ಡಾ.ಕೆ.ಸುಧಾಕರ್

