ತಿರುಮಲ: ದೇಶಾದ್ಯಂತ ಕೋವಿಡ್ ಎರಡನೇ ಅಲೆ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಜಗತ್ಪ್ರಸಿದ್ಧ ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ಆಲಯದಲ್ಲೂ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ.
ತಿರುಪತಿ ಹಾಗೂ ತಿರುಮಲವೂ ಸೇರಿದಂತೆ ಆಂಧ್ರ ಪ್ರದೇಶದಲ್ಲಿ ಕೋವಿಡ್ ಸೋಂಕಿತರು ಹೆಚ್ಚುತ್ತಿರುವ ಕಾರಣ ತಿರುಪತಿ ತಿರುಮಲ ದೇವಸ್ಥಾನದ ಆಡಳಿತ ಮಂಡಳಿ (ಟಿಟಿಡಿ) ಏ. 12ರಿಂದ ಸರ್ವ ದರ್ಶನ ಟೋಕನ್ ವಿತರಣೆಯನ್ನು ಪೂರ್ಣವಾಗಿ ಸ್ಥಗಿತಗೊಳಿಸುತ್ತಿರುವುದಾಗಿ ಪ್ರಕಟಿಸಿದೆ.
ಏ. 11ರ ಸಂಜೆವರೆಗೂ ಮಾತ್ರವೇ ಸರ್ವ ದರ್ಶನ ಟೋಕನ್‍ಗಳನ್ನು ನೀಡಲಾಗುವುದು.
ಮತ್ತೆ ಟೋಕನ್‍ಗಳ ವಿತರಣೆ ಎಂದಿನಿಂದ ಆರಂಭವಾಗುತ್ತದೆ ಎಂಬ ಮಾಹಿತಿಯನ್ನು ಮುಂದೆ ತಿಳಿಸಲಾಗುವುದು ಎಂದು ಟಿಟಿಡಿ ತಿಳಿಸಿದೆ.
ಬೆಟ್ಟದ ಮೇಲೆ ಮಾತ್ರವಲ್ಲದೆ, ತಿರುಪತಿ ನಗರದಲ್ಲಿ ಕೂಡ ಕೋವಿಡ್ ಸೋಂಕಿತರು ಹೆಚ್ಚುತ್ತಿದ್ದಾರೆ. ಹೀಗಾಗಿ ಅಲ್ಲೆಲ್ಲ ಸೋಂಕು ವ್ಯಾಪಕವಾಗಿ ಹರಡುವ ಭೀತಿ ಇದೆ. ಈ ಹಿನ್ನೆಲೆ ಸರಕಾರದ ಮಾರ್ಗಸೂಚಿ ಹಾಗೂ ತಜ್ಞರ ಸಲಹೆಯಂತೆ ಸರ್ವ ದರ್ಶನ ಟೋಕನ್‍ಗಳನ್ನು ನಿಲ್ಲಿಸಲಾಗುತ್ತಿದೆ ಎಂದು ಟಿಟಿಡಿ ಪ್ರಕಟಣೆ ತಿಳಿಸಿದೆ.
ಆನ್‍ಲೈನ್‍ನಲ್ಲಿ ಪ್ರತಿದಿನ 15,000 ಟೋಕನ್‍ಗಳನ್ನು ನೀಡಲಾಗುತ್ತದೆ. ಮಾರ್ಚ್‍ನಲ್ಲಿ ದಿನಕ್ಕೆ 22,000 ವರೆಗೂ ಸರ್ವದರ್ಶನ ಟೋಕನ್‍ಗಳನ್ನು ನೀಡಲಾಗುತ್ತಿತ್ತು. ನಂತರÀ ಆ ಪ್ರಮಾಣವನ್ನು 15,000ಕ್ಕೆ ಇಳಿಸಲಾಗಿತ್ತು.
ಇದೇ ವೇಳೆ ಶ್ರೀ ಕಾಳಹಸ್ತಿಯಲ್ಲೂ ಬಿಗಿಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಅಲ್ಲಿ ನಿತ್ಯವೂ ನಡೆಯುವ ರಾಹುಶಾಂತಿ ಪೂಜೆಯನ್ನು ಬಂದ್ ಮಾಡುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ.
ಭಕ್ತರ ನಡುವೆ ದೈಹಿಕ ಅಂತರ, ಮಾಸ್ಕ್ ಧರಿಸುವುದು, ಸ್ಯಾನಿಟೈಸೇಷನ್ ಮೇಲೆ ಹೆಚ್ಚು ನಿಗಾ ಇರಿಸಲಾಗಿದೆ.
ತಿರುಪತಿಯಲ್ಲೂ ಹೆಚ್ಚುತ್ತಿರುವ ಸೋಂಕು
ಸದ್ಯಕ್ಕೆ ತಿರುಪತಿ ಲೋಕಸಭೆ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಹೀಗಾಗಿ ಅಂಕೆ ಇಲ್ಲದೆ ರಾಜಕೀಯ ಸಮಾವೇಶಗಳು, ಸಭೆಗಳು ನಡೆಯುತ್ತಿವೆ. (ಕರ್ನಾಟಕದ ಮಾಜಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.) ಹೀಗಾಗಿ ನಗರದಲ್ಲಿ ಸೋಂಕು ಹೆಚ್ಚುತ್ತಿದೆ. ಪ್ರಸಿದ್ಧ ಶ್ರೀ ಗೋವಿಂದರಾಜುಲು ದೇವಾಲಯ ಸೇರಿದಂತೆ ಹತ್ತಿರದ ಅಲಮೇಲ ಮಂಗಾಪುರದ ಅಮ್ಮನವರ ಆಲಯದಲ್ಲೂ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಕೋವಿಡ್ ಸೋಂಕು: ಏ. 12ರಿಂದ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ಸರ್ವ ದರ್ಶನ ಟೋಕನ್ ವಿತರಣೆ ಬಂದ್

