ಸರ್ಕಾರ ನಡೆಸುವುದು ನಮಗೆ ಗೊತ್ತಿದೆ -ಸಿಎಂ ಬಿ.ಎಸ್.ವೈ

ಹುಬ್ಬಳ್ಳಿ: ಸರ್ಕಾರ ನಡೆಸುವುದು ನಮಗೆ ಗೊತ್ತಿದೆ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಹೇಳಿದರು.
ನಗರದಲ್ಲಿ ಗುರುವಾರ ಸಿಎಂ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಅಸುರಕ್ಷಿತ ಪ್ರಯಾಣದ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಸಿಎಂ ಗರಂ ಆಗಿ ಸರ್ಕಾರ ನಡೆಸುವುದು ನಮಗೆ ಗೊತ್ತಿದೆ ಎಂದು ಹೇಳಿದರು.
ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಖಾಸಗಿ ವಾಹನಗಳು ಕಾರ್ಯಾಚರಣೆ ನಡೆಸುತ್ತಿದ್ದು, ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.
ನಾನು ಇವತ್ತು ಬೆಂಗಳೂರಿಗೆ ಹೋಗುತ್ತಿದ್ದೇನೆ. ಸಾರಿಗೆ ನೌಕರರ ಮುಷ್ಕರ ವಿಚಾರವಾಗಿ ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇನೆ ಎಂದರು. ಖಾಸಗಿ ವಾಹನಗಳ ದುಪ್ಪಟ್ಟು ಹಣ ವಸೂಲಿ ಮಾಡುತ್ತಿಲ್ಲ ಎಂದು ಸಿಎಂ ಹೇಳಿ, ನಾವು ನಿಗದಿ ಮಾಡಿದ ಹಣ ಮಾತ್ರ ವಸೂಲಿ ಮಾಡುತ್ತಿದ್ದಾರೆ. ಒಂದು ವೇಳೆ ದುಪ್ಪಟ್ಟು ಹಣ ವಸೂಲಿ ಮಾಡಿದರೆ, ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಸಿದರು.
ವಿಶೇಷವಾದ ಸಂದರ್ಭದಲ್ಲಿ ಖಾಸಗಿ ವಾಹನ ಓಡಿಸಲಾಗುತ್ತಿದೆ. ಪ್ರಯಾಣಿಕರು ಯಾವುದೇ ಆತಂಕ ಪಡುವುದು ಬೇಡ ಎಂದು ಮುಖ್ಯಮಂತ್ರಿಗಳು ಹೇಳಿದರು.
ವಿಶೇಷ ರೈಲು ಸಂಚಾರ: ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ ವಿಭಾಗ ಗುರುವಾರದಿಂದ ಏ. 14ರ ವರೆಗೆ ವಿಶೇಷ ರೈಲುಗಳು ಓಡಿಸಲಿದೆ.
ಹುಬ್ಬಳ್ಳಿ-ಯಶವಂತಪುರ, ಯಶವಂತಪುರ-ವಿಜಯಪುರ, ಯಶವಂತಪುರ-ಹುಬ್ಬಳ್ಳಿ, ಮೈಸೂರು-ಬೀದರ್, ಬೀದರ್-ಯಶವಂತಪುರ, ಕಾರವಾರ-ಯಶವಂತಪುರ, ಬೆಂಗಳೂರು-ಮೈಸೂರು ನಡುವೆ 18 ವಿಶೇಷ ರೈಲುಗಳು ಸಂಚರಿಸಲಿವೆ.