ರಾಜ್ಯದಲ್ಲೂ ಮಹಾರಾಷ್ಟ್ರ ಮಾದರಿ ಕಠಿಣ ನಿಯಮ ಜಾರಿ ಅಗತ್ಯ -ಸಚಿವ ಸುಧಾಕರ್

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹಾಗೂ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮಾದರಿಯ ಕಠಿಣ ನಿಯಮವನ್ನು ರಾಜ್ಯದಲ್ಲೂ ಜಾರಿಗೊಳಿಸಬೇಕಾದ ಅಗತ್ಯವಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಸಚಿವ ಸುಧಾಕರ್ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಕೊರೊನಾ 2ನೇ ಅಲೆ ಸೋಂಕು ಹಾಗೂ ಸಾವಿನ ಪ್ರಮಾಣ ನಿಯಂತ್ರಿಸಬೇಕಾದರೆ ಕೆಲವು ಕಠಿಣ ನಿಯಮ ಜಾರಿ ಮಾಡುವುದು ಅನಿವಾರ್ಯ ಎಂದು ಹೇಳಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿರುವಂತೆ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಲಾಕ್ ಡೌನ್ ಜಾರಿ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಆದರೆ, ನಮ್ಮ ಮುಂದೆ ಮಹಾರಾಷ್ಟ್ರ ಮಾದರಿಯಲ್ಲಿ ಕೆಲವು ಬಿಗಿಯಾದ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಸುಧಾಕರ್ ಹೇಳಿದರು.
ಲಾಕ್ ಡೌನ್ ಹೊರತುಪಡಿಸಿ ಏನೆಲ್ಲ ಬಿಗಿ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಭಾನುವಾರ ನಡೆಯುವ ಸರ್ವಪಕ್ಷ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದರು.
ಇದು ಸಾಂಕ್ರಾಮಿಕ ರೋಗದ ಸಮಯ. ಇದರಲ್ಲಿ ರಾಜಕೀಯ ಭಿನ್ನಾಭಿಪ್ರಾಯ ಮರೆತು ಎಲ್ಲರೂ ಒಂದಾಗಬೇಕು. ಕೊರೊನಾ ನಿಯಂತ್ರಣಕ್ಕೆ ಪ್ರತಿಪಕ್ಷದವರ ಸಲಹೆಗಳು ಕೂಡ ಅಗತ್ಯ ಎಂದು ಡಾ. ಸುಧಾಕರ್ ಹೇಳಿದರು.
ಸಾರ್ವಜನಿಕರು ಕೆಲವು ಕಠಿಣ ಕ್ರಮಗಳಿಗೆ ಕೈ ಜೋಡಿಸಬೇಕು. ನಮಗೆ ನಾವೇ ಸ್ವಯಂ ನಿಯಂತ್ರಣ ಹಾಕಿಕೊಳ್ಳುವ ಮೂಲಕ ಸರ್ಕಾರದ ನಿರ್ಧಾರಕ್ಕೆ ಸಹಕಾರ ಕೊಡಬೇಕು. ಮದುವೆ ಸೇರಿದಂತೆ ಮತ್ತಿತರ ಕಾರ್ಯಕ್ರಮಗಳಿಗೆ ಕಡಿವಾಣ ಹಾಕುವ ಅಗತ್ಯವಿದೆ ಎಂದು ಸಚಿವ ಡಾ. ಸುಧಾಕರ್ ಅಭಿಪ್ರಾಯ ವ್ಯಕ್ತಪಡಿಸಿದರು.