ದೆಹಲಿಯಲ್ಲಿ ಇಂದು ರಾತ್ರಿಯಿಂದ ಲಾಕ್ ಡೌನ್

ನವದೆಹಲಿ: ದಿನದಿಂದ ದಿನಕ್ಕೆ ಕೊರೊನಾ ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಲಾಕ್ ಡೌನ್ ಘೋಷಿಸಿದೆ.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ಸುದ್ದಿಗೋಷ್ಠಿ ನಡೆಸಿ ಲಾಕ್ ಡೌನ್ ಕುರಿತು ಮಾಹಿತಿ ನೀಡಿದರು.
ಏ. 19 (ಇಂದು)ರ ರಾತ್ರಿ 10 ಗಂಟೆಯಿಂದ ಮುಂದಿನ ಸೋಮವಾರ ಮುಂಜಾನೆ 6 ಗಂಟೆಯವರೆಗೆ ಲಾಕ್ ಡೌನ್ ಜಾರಿಯಲ್ಲಿರುತ್ತದೆ ಎಂದವರು ತಿಳಿಸಿದರು.
ಅಗತ್ಯ ಸೇವೆಗಳು, ಆಹಾರ ಸೇವೆಗಳು, ವೈದ್ಯಕೀಯ ಸೇವೆಗಳು ಎಂದಿನಂತೆ ಮುಂದುವರಿಯಲಿದೆ ಎಂದರು.
ಮದುವೆ ಇನ್ನಿತರ ಶುಭ ಸಮಾರಂಭಗಳನ್ನು ಕೇವಲ 50 ಜನರನ್ನು ಸೇರಿ ನಡೆಸಬಹುದು. ಶವಸಂಸ್ಕಾರ ಕಾರ್ಯಕ್ಕೆ 20 ಜನರು ಸೇರುವ ಅವಕಾಶವನ್ನು ಸರ್ಕಾರ ಕಲ್ಪಿಸಿದೆ. ಅದಕ್ಕಾಗಿ ಪ್ರತ್ಯೇಕವಾಗಿ ಪಾಸ್ ಗಳನ್ನು ನೀಡಲಾಗುತ್ತದೆ ಎಂದರು.
ದೆಹಲಿಯಲ್ಲಿನ ಜನರ ಆರೋಗ್ಯ ವ್ಯವಸ್ಥೆ ಕುಸಿತ ತಡೆಯಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ ಎಂದು ಸಿಎಂ ಅವರು ಹೇಳಿದರು.
ವಲಸೆ ಕಾರ್ಮಿಕರಲ್ಲಿ ಮನವಿ ಮಾಡಿಕೊಂಡ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಇದು ಕೇವಲ 6 ದಿನಗಳವರೆಗೆ ಮಾತ್ರ ಲಾಕ್ ಡೌನ್ ಜಾರಿಯಲ್ಲಿರುತ್ತದೆ. ದೆಹಲಿ ಬಿಟ್ಟು ಹೋಗಬೇಡಿ. ಸರ್ಕಾರ ನಿಮ್ಮ ರಕ್ಷಣೆಗಿದೆ ಎಂದು ಭರವಸೆ ನೀಡಿದ್ದಾರೆ.
ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಕೊರೊನಾ ನಿಯಂತ್ರಣಕ್ಕೆ ಸಹಕರಿಸಿ ಎಂದು ಕೇಜ್ರಿವಾಲ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.