ಬೆಂಗಳೂರು: ಕೋವಿಡ್ ಮೊದಲ ಅಲೆ, ಚೀನಾದಿಂದ ಬಂದರೆ, ಎರಡನೇ ಅಲೆ ಇಲ್ಲಿನ ಸರ್ಕಾರಗಳಿಂದ ಬಂದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ನಗರದಲ್ಲಿ ಮಂಗಳವಾರ ಡಿಕೆಶಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಕಾಂಗ್ರೆಸ್ ಪಕ್ಷದವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ನಿಲ್ಲಿಸಲಿ ಎಂಬ ಗೃಹ ಸಚಿವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ವಿರೋಧ ಪಕ್ಷದವರ ಕೆಲಸ ಏನು ಎಂದು ಗೃಹ ಸಚಿವರೇ ತಿಳಿಸಲಿ. ಅವರೇ ನಮಗೆ ಕರೆದು ಪಾಠ ಮಾಡಲಿ ಎಂದು ಮಾರ್ಮಿಕವಾಗಿ ನುಡಿದರು.
ಅಷ್ಟದಿಕ್ಪಾಲಕರಲ್ಲಿ ಯಾರಾದರೂ ಒಬ್ಬರು ಮಾತನಾಡುತ್ತಿದ್ದಾರಾ? ಎಂದು ಡಿಕೆಶಿ ಪ್ರಶ್ನಿಸಿದರು.
ರಾಜ್ಯದಲ್ಲಿ ಎಷ್ಟು ಐಸಿಯು ಹಾಸಿಗೆ ಇವೆ? ಯಾವ ಆಸ್ಪತ್ರೆಯಲ್ಲಿ ಏನೇನಿದೆ, ಏನೇನಿಲ್ಲ ಎಂಬುದರ ಬಗ್ಗೆ ರಿಯಾಲಿಟಿ ಚೆಕ್ ಮಾಡೋಣ. ಈ ಪರಿಸ್ಥಿತಿಯಲ್ಲಿ ಜನರಿಗೆ ಧೈರ್ಯ ತುಂಬಬೇಕು. ಸಚಿವರಾಗಿ ನೀವು ಜನರಿಗೆ ಯಾವ ರೀತಿ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೀರಿ? ಕೇವಲ ಆರೋಗ್ಯ ಹಾಗೂ ಕಂದಾಯ ಸಚಿವರು ಮಾಧ್ಯಮಗಳಿಗೆ ಹೇಳಿಕೆ ಕೊಟ್ಟರೆ ಆಗೋದಿಲ್ಲ. ಸರ್ಕಾರದಲ್ಲಿರುವ ಎಲ್ಲ ಮಂತ್ರಿಗಳು, ಅಧಿಕಾರಿಗಳು ಸಮರೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ಡಿಕೆಶಿ ಸಲಹೆ ನೀಡಿದರು.
ಶವ ಸಂಸ್ಕಾರದ ವಿಚಾರದಲ್ಲಿ ಹೆಚ್ಚಿನ ವೆಚ್ಚದ ಬಗ್ಗೆ ಮಾತನಾಡುತ್ತೀರಿ. ಬೆಂಗಳೂರಿನ ಸುತ್ತಮುತ್ತಲಿನ ಸರ್ಕಾರಿ ಜಾಗಗಳನ್ನು ಗುರುತಿಸಿ, ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿ. ಮೃತರಿಗೆ ಗೌರವಯುತ ವಿದಾಯಕ್ಕೆ ಅವಕಾಶ ಮಾಡಿಕೊಡಿ. ಅದಕ್ಕೂ ಅವಕಾಶ ಮಾಡಿಕೊಡಲು ಆಗದಿದ್ದರೆ ಇದ್ಯಾವ ಸೀಮೆ ಸರ್ಕಾರ? ಇದಕ್ಕೂ ರಾಜ್ಯಪಾಲರ ಆದೇಶಕ್ಕಾಗಿ ಕಾಯಬೇಕಾ? ಶವ ಸಂಸ್ಕಾರಕ್ಕೆ ಟೋಕನ್ ವ್ಯವಸ್ಥೆ ಯಾಕೆ? ನಿಮ್ಮ ಆಡಳಿತ ನೋಡಿ ಜನ ನಗುತ್ತಿದ್ದಾರೆಂದು ಡಿಕೆ ಶಿವಕುಮಾರ್ ಹೇಳಿದರು.
ಕೋವಿಡ್ ಸಾವಿನ ಬಗ್ಗೆ ಆಡಿಟ್ ನಡೆಯಬೇಕಿದೆ. 164 ಜನರು ಸತ್ತಿದ್ದರೆ, ಅಧಿಕಾರಿಗಳ ಮೂಲಕ ಸತ್ತವರ ಕುಟುಂಬಕ್ಕೆ ಸಾವಿನ ಬಗ್ಗೆ ಮಾಹಿತಿ ಕೊಡಿ. ಇಲ್ಲಿ ಯಾರೂ ಪರಿಪಕ್ವರಲ್ಲ. ನಿಮ್ಮ ತಪ್ಪನ್ನು ನೀವು ತಿದ್ದಿಕೊಂಡು ಮುಂದಿನ ಹೆಜ್ಜೆ ಇಡಿ. ಈ ಪರಿಸ್ಥಿತಿ ನಿಭಾಯಿಸಲು ನಿಮ್ಮ ಕೈಯಲ್ಲಿ ಆಗದಿದ್ದರೆ ರಾಜೀನಾಮೆ ಕೊಟ್ಟು ಹೋಗಿ ಎಂದು ಡಿಕೆಶಿ ಹೇಳಿದರು.
ಜನರ ತಪ್ಪು ಅಂದರೆ, ಅವರಿಗೆ ಮಾರ್ಗದರ್ಶನ ನೀಡಲು ನಿಮ್ಮ ಸರ್ಕಾರ ಇದೆ. ಅದು ನಿಮ್ಮ ಜವಾಬ್ದಾರಿ. ಹಾಗಿದ್ದರೆ ನೀವೇಕೆ ಅಧಿಕಾರದಲ್ಲಿದ್ದೀರಿ? ಅದನ್ನು ಜನಕ್ಕೆ ಬಿಟ್ಟುಬಿಡಿ ಎಂದರು.
ರಾಜ್ಯಪಾಲರಿಗೆ ಸಭೆ ಕರೆಯುವ ಅಧಿಕಾರ ಇದೆಯೋ, ಇಲ್ಲವೋ ಅದು ಬೇರೆ ಪ್ರಶ್ನೆ. ಈ ರಾಜ್ಯದಲ್ಲಿ ಅಧಿಕಾರ ಸರಿಯಾಗಿ ನಡೆಯುತ್ತಿಲ್ಲ ಎಂಬುದನ್ನು ಅರಿತು ಅವರು ಸಭೆ ಕರೆದಿದ್ದಾರೆ. ನಾವದನ್ನು ಸ್ವಾಗತಿಸುತ್ತೇವೆ ಎಂದರು.
ಕೋವಿಡ್ ಮೊದಲ ಅಲೆ, ಚೀನಾದಿಂದ ಬಂದರೆ, ಎರಡನೇ ಅಲೆ ಇಲ್ಲಿನ ಸರ್ಕಾರಗಳಿಂದ ಬಂದಿದೆ -ಡಿಕೆ ಶಿವಕುಮಾರ್

