ವಿವಿಧ ಆಸ್ಪತ್ರೆಗಳಿಗೆ ಡಿಸಿಎಂ ಮಿಂಚಿನ ಭೇಟಿ; ಬೆಂಗಳೂರಿನ ಎಲ್ಲ ಚಿತಾಗಾರಗಳಲ್ಲೂ ಕೋವಿಡ್ ಮೃತರ ಅಂತ್ಯಕ್ರಿಯೆ -ಡಾ.ಅಶ್ವತ್ಥನಾರಾಯಣ

ಬೆಂಗಳೂರು: ಕೋವಿಡ್ ಎರಡನೇ ಅಲೆಯಿಂದ ನಗರದ ಜನರು ಕಂಗೆಟ್ಟಿರುವ ಹಿನ್ನೆಲೆಯಲ್ಲಿ ಬುಧವಾರ ವಿವಿಧ ಆಸ್ಪತ್ರೆ-ಲ್ಯಾಬ್‍ಗಳಿಗೆ ಮಿಂಚಿನ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಜನರ ಸ್ಯಾಂಪಲ್‍ಗಳನ್ನು ಸ್ವೀಕರಿಸಿದ 24 ಗಂಟೆಯೊಳಗೆ ರಿಸಲ್ಟ್ ಕೊಡಬೇಕು ಎಂದು ತಾಕೀತು ಮಾಡಿದರು.
ಬುಧವಾರ ಬೆಳಗ್ಗೆಯಿಂದಲೇ ಮಲ್ಲೇಶ್ವರದ ಕೆ.ಸಿ ಜನರಲ್ ಆಸ್ಪತ್ರೆ, ರಾಜಾಜಿನಗರದ ಇಎಸ್‍ಐ, ಲೈಫ್‍ಸೆಲ್ ಲ್ಯಾಬ್, ವಿಕ್ಟೋರಿಯಾ ಹಾಗೂ ಕಿದ್ವಾಯಿ ಆಸ್ಪತ್ರೆಗಳಿಗೆ ಭೇಟಿ ನೀಡಿದ ಅವರು; ಅಲ್ಲಿನ ಕೋವಿಡ್ ವ್ಯವಸ್ಥೆ, ಚಿಕಿತ್ಸೆ, ಲ್ಯಾಬ್, ಲಸಿಕೆ ನೀಡಿಕೆ ಇತ್ಯಾದಿ ಅಂಶಗಳನ್ನು ಪರಿಶೀಲನೆ ನಡೆಸಿದರು.
ಪ್ರತಿ ದಿನವೂ ಲ್ಯಾಬ್‍ಗಳಿಗೆ ಕನಿಷ್ಠ 3 ಬ್ಯಾಚ್‍ಗಳಲ್ಲಿ ಸ್ಯಾಂಪಲ್ ಕಳಿಸಬೇಕು ಹಾಗೂ ಆ ಸ್ಯಾಂಪಲ್ ಸ್ವೀಕರಿಸಿದ 24 ಗಂಟೆಯೊಳಗೆ ಲ್ಯಾಬ್‍ಗಳು ರಿಸಲ್ಟ್ ಕೊಡಬೇಕು ಎಂದು ಡಿಸಿಎಂ ಅವರು, ಆಸ್ಪತ್ರೆಗಳ ಹಿರಿಯ ವೈದ್ಯಾಧಿಕಾರಿಗಳು, ಆಡಳಿತ ವರ್ಗದವರಿಗೆ ಸ್ಪಷ್ಟ ನಿರ್ದೇಶನ ನೀಡಿದರು.
ಒಂದು ಕಡೆ ನಿರಂತರವಾಗಿ ಗಂಟಲು ದ್ರವ ಇತ್ಯಾದಿ ಕಲೆಕ್ಟ್ ಮಾಡುತ್ತಿದ್ದರೆ, ಮತ್ತೊಂದೆಡೆ ಪ್ರತಿ 3 ಗಂಟೆಗೊಮ್ಮೆ ಲ್ಯಾಬ್‍ಗಳು ರಿಸಲ್ಟ್ ಕೊಡುತ್ತಿರಲೇಬೇಕು. ಸ್ಯಾಂಪಲ್ ಕೊಟ್ಟ 24 ಗಂಟೆಯೊಳಗೆ ಫಲಿತಾಂಶ ಸಿಕ್ಕರೆ ಸೋಂಕಿಗೆ ಒಳಗಾದವರು ತಕ್ಷಣವೇ ಚಿಕಿತ್ಸೆ ಪಡೆಯಬಹುದು. ಆಗ ಜೀವಕ್ಕೆ ಹಾನಿಯಾಗುವವುದಿಲ್ಲ ಎಂದು ಡಿಸಿಎಂ ಅವರೆಲ್ಲರಿಗೂ ಮನವರಿಕೆ ಮಾಡಿಕೊಟ್ಟರು.
ಯಾವುದೇ ತುರ್ತು ಸಂದರ್ಭದಲ್ಲಿ ಕೋವಿಡ್ ಸಹಾಯವಾಣಿ 1912 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಿ ಎಂದ ಅವರು, ಎಲ್ಲ ಆಸ್ಪತ್ರೆಗಳಲ್ಲಿ ಟೆಸ್ಟಿಂಗ್, ವ್ಯಾಕ್ಸಿನೇಷನ್, ಹಾಸಿಗೆಗಳ ಪ್ರಮಾಣ, ಆ್ಯಕ್ಸಿಜನ್ ಸೇರಿ ಮುಂತಾದ ಸಿದ್ಧತೆಗಳನ್ನು ಪರಿಶೀಲಿಸಿದರು.
ಪರೀಕ್ಷೆ ಮಾಡಿಸಿಕೊಳ್ಳಲು ಮನವಿ: ಬಹಳ ಜನರಿಗೆ ಕೋವಿಡ್ ಲಕ್ಷಣಗಳಿದ್ದರೂ ಪರೀಕ್ಷೆ ಮಾಡಿಸಿಕೊಳ್ಳುತ್ತಿಲ್ಲ. ಕೆಮ್ಮು ಶೀತ, ನೆಗಡಿಯಂಥ ರೋಗ ಲಕ್ಷಣಗಳಿದ್ದವರು ತಪ್ಪದೇ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ವಿಳಂಬ ಮಾಡಬಾರದು ಎಂದು ಡಿಸಿಎಂ ಮನವಿ ಮಾಡಿದರು.
ಎಲ್ಲ ಚಿತಾಗಾರಗಳಲ್ಲಿ ಕೋವಿಡ್ ಮೃತರ ಅಂತ್ಯಕ್ರಿಯೆ: ಆಸ್ಪತ್ರೆಗಳಿಗೆ ಭೇಟಿ ಆರಂಭಿಸಿದ ವೇಳೆ ಕೆ.ಸಿ.ಜನರಲ್ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ ಅವರು, ಬೆಳಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ ಜತೆ ಮಾತುಕತೆ ನಡೆಸಿದೆ. ಕೆಲ ಆಯ್ದ ಚಿತಾಗಾರಗಳಲ್ಲಿ ಮಾತ್ರ ಕೋವಿಡ್ ಮೃತರ ಅಂತ್ಯಕ್ರಿಯೆ ನಡೆಸುತ್ತಿದ್ದ ಕಾರಣಕ್ಕೆ ನಗರದಲ್ಲಿ ಅಂತ್ಯ ಸಂಸ್ಕಾರಕ್ಕೆ ತೀವ್ರ ಸಮಸ್ಯೆಯಾಗಿತ್ತು. ಆ ಸಮಸ್ಯೆಯನ್ನು ಬಗೆಹರಿಸಲಾಗಿದೆ ಎಂದರು.
ಇಂದಿನಿಂದ ನಗರದ ಎಲ್ಲ 13 ಚಿತಾಗಾರಗಳಲ್ಲೂ ಕೋವಿಡ್ ಮೃತರ ಅಂತ್ಯಕ್ರಿಯೆ ನಡೆಸಲು ಗುಪ್ತ ಅವರ ಜತೆ ನಡೆಸಿದ ಮಾತುಕತೆ ವೇಳೆ ನಿರ್ಧರಿಸಲಾಯಿತು. ಇನ್ನು ಈ ಸಮಸ್ಯೆ ಉಂಟಾಗುವುದಿಲ್ಲ. ಮೃತರ ಗೌರವಯುತ ಅಂತ್ಯಕ್ರಿಯೆಗೆ ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.