ಬೆಂಗಳೂರು/ನವದೆಹಲಿ: ಕೋವಿಡ್ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ಆಮ್ಲಜನಕ ಹಾಗೂ ರೆಮ್ಡಿಸಿವಿರ್ ಹೆಚ್ಚುವರಿ ಉತ್ಪಾದನೆ ಹಾಗೂ ಪೂರೈಕೆಗೆ ಕೇಂದ್ರ ಸರಕಾರ ಸಿದ್ಧವಿದ್ದು, ರಾಜ್ಯ ಸರಕಾರಗಳೂ ಪರಸ್ಪರ ಸಹಕರಿಸುವ ಮೂಲಕ ಸವಾಲನ್ನು ಸಮರ್ಥವಾಗಿ ಎದುರಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದರು.
ಅವರು ಶುಕ್ರವಾರ ಕರ್ನಾಟಕವೂ ಸೇರಿ ಕೋವಿಡ್ ಪೀಡಿತ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಈ ವಿಷಯ ತಿಳಿಸಿದರು.
ಈಗ ಎದುರಾಗಿರುವ ವಿಪತ್ತನ್ನು ಎದುರಿಸಲು ಆರೋಗ್ಯ ಸೇವಾ ವ್ಯವಸ್ಥೆ ಸುಧಾರಣೆಗೆ ಒತ್ತು ನೀಡುವುದು, ಮುನ್ನೆಚ್ಚರಿಕೆಯ ಕ್ರಮಗಳ ಕಟ್ಟುನಿಟ್ಟಿನ ಪಾಲನೆ, ಅನಗತ್ಯ ಆಸ್ಪತ್ರೆಗೆ ದಾಖಲಾಗುವುದನ್ನು ತಪ್ಪಿಸುವುದು ಹಾಗೂ ಆಮ್ಲಜನಕದ ಸಮರ್ಪಕ ಹಾಗೂ ಮಿತಬಳಕೆಗೆ ಆದ್ಯತೆ ನೀಡುವುದು ಹಾಗೂ ಜನರಲ್ಲಿ ವಿಶ್ವಾಸ ಮೂಡಿಸುವುದು ಅತಿ ಅಗತ್ಯ ಎಂದು ಪ್ರಧಾನಿ ಮೋದಿ ತಿಳಿಸಿದರು.
ಆಮ್ಲಜನಕದ ದುರ್ಬಳಕೆ ಆಗದಂತೆ ಎಲ್ಲ ರಾಜ್ಯಗಳಲ್ಲೂ ಆಕ್ಸಿಜನ್ ಆಡಿಟ್ ಮಾಡಿಸುವಂತೆ ಪ್ರಧಾನ ಮಂತ್ರಿ ಸಲಹೆ ನೀಡಿದರು. ಜತೆಗೆ ಆಮ್ಲಜನಕದ ಟ್ಯಾಂಕರುಗಳ ಸುಗಮ ಸಂಚಾರಕ್ಕೆ ರಾಜ್ಯ ಸರಕಾರಗಳು ವ್ಯವಸ್ಥೆ ಮಾಡಬೇಕು ಎಂದು ಅವರು ಸೂಚಿಸಿದರು.
ಕೊರೊನಾ ಹೆಚ್ಚುತ್ತಿರುವ ಪ್ರಕರಗಳಿಂದಾಗಿ ಮಾನವ ಸಂಪನ್ಮೂಲ ಅಗತ್ಯತೆಯೂ ಹೆಚ್ಚುತ್ತಿದ್ದು, ಇತ್ತೀಚೆಗೆ ನಿವೃತ್ತರಾದ ಸಿಬ್ಬಂದಿಯ ಸೇವೆ ಬಳಕೆ ಮಾಡಿಕೊಳ್ಳಿ ಎಂದು ಪ್ರಧಾನಿ ಅವರು ಮುಖ್ಯಮಂತ್ರಿಗಳಿಗೆ ಸಲಹೆ ಮಾಡಿದರು.
ಆಮ್ಲಜನಕ ಪೂರೈಕೆಗೆ ಸಿಎಂ ಮನವಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿ, ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಕೈಗೊಳ್ಳುತ್ತಿರುವ ಕ್ರಮಗಳು ಹಾಗೂ ರಾಜ್ಯದ ವಸ್ತುಸ್ಥಿತಿಯನ್ನು ವಿವರಿಸಿದರು.
ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ರಾಜ್ಯಕ್ಕೆ ದಿನಕ್ಕೆ 1471 ಟನ್ ಆಮ್ಲಜನಕ ಹಂಚಿಕೆ ಮಾಡುವಂತೆ ಯಡಿಯೂರಪ್ಪ ಅವರು ಪ್ರಧಾನಮಂತ್ರಿಗೆ ಮನವಿ ಮಾಡಿದರು.
ರಾಜ್ಯದಲ್ಲಿ ಆಮ್ಲಜನಕದ ಬಳಕೆ ದಿನೇದಿನೆ ಹೆಚ್ಚುತ್ತಿದ್ದು, ಗುರುವಾರ ರಾಜ್ಯದಲ್ಲಿ 500 ಟನ್ ಬಳಕೆಯಾಗಿದೆ. ಕೇಂದ್ರ ಸರಕಾರವು ರಾಜ್ಯಕ್ಕೆ ಕೇವಲ 300 ಟನ್ ಆಮ್ಲಜನಕ ಹಂಚಿಕೆ ಮಾಡಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ಹಲವು ಆರೋಗ್ಯ ಸೇವಾ ಕೇಂದ್ರಗಳನ್ನು ಮುಚ್ಚುವ ಪರಿಸ್ಥಿತಿ ಎದುರಾಗುವುದು ಎಂಬ ಅಂಶವನ್ನು ಯಡಿಯೂರಪ್ಪ ಅವರು ಪಿಎಂ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನೇದಿನೆ ಹೆಚ್ಚುತ್ತಿದ್ದು, ಪಾಸಿಟಿವಿಟಿ ದರ ಶೇ. 16ರಷ್ಟಿದೆ. ಬೆಂಗಳೂರು ನಗರ ಅತಿ ಹೆಚ್ಚು ಪೀಡಿತವಾಗಿದ್ದು, ತುಮಕೂರು, ಬಳ್ಳಾರಿ, ಮೈಸೂರು, ಹಾಸನ ಮತ್ತು ಕಲಬುರಗಿ ಜಿಲ್ಲೆಗಳಲ್ಲಿಯೂ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿವೆ ಎಂದು ಸಿಎಂ ಮಾಹಿತಿ ನೀಡಿದರು.
ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರದಂತೆ ತಡೆಯಲು ಕೆಲ ನಿಬರ್ಂಧಗಳನ್ನು ವಿಧಿಸಲಾಗಿದೆ. ಜತೆಗೆ ಇತರ ಮುನ್ನೆಚ್ಚರಿಕೆಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತಿದೆ. ರಾಜ್ಯದ ಆರ್ಥಿಕ ಚಟುವಟಿಕೆಗಳ ಮೇಲೆ ಕನಿಷ್ಠ ಪರಿಣಾಮವಾಗುವ ರೀತಿಯಲ್ಲಿ ನಿಬರ್ಂಧಗಳನ್ನು ವಿಧಿಸಲಾಗಿದೆ ಎಂದು ಮುಖ್ಯಮಂತ್ರಿ ವಿವರಿಸಿದರು.
ಕಳೆದ ಆರು ತಿಂಗಳಲ್ಲಿ ರಾಜ್ಯದ ಸರಕಾರಿ ಆಸ್ಪತ್ರೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ ವಹಿಸಿದ್ದು, ಇದೀಗ ಅನುಕೂಲವಾಗಿದೆ. ಸರಕಾರದ ಶಿಫಾರಸಿನ ಮೇರೆಗೆ ರೋಗಿಗಳನ್ನು ದಾಖಲಿಸಲು ಖಾಸಗಿ ಆಸ್ಪತ್ರೆಗಳ ಶೇ. 50ರಷ್ಟು ಹಾಸಿಗೆಗಳನ್ನು ಪಡೆಯಲಾಗುತ್ತಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಹೆಚ್ಚಿನ ಬೇಡಿಕೆ ಬಂದರೆ ಅನುವಾಗುವಂತೆ ಖಾಸಗಿ ಆಸ್ಪತ್ರೆಗಳು ಸಮೀಪದ ಹೋಟೆಲ್ ಗಳ ಸಹಯೋಗದೊಂದಿಗೆ ಸ್ಟೆಪ್ ಡೌನ್ ಆಸ್ಪತ್ರೆಗಳನ್ನು ಸ್ಥಾಪಿಸಲು ಅನುಮತಿ ನೀಡಲಾಗಿದೆ. ಐಸಿಯು ಸೌಲಭ್ಯಗಳಿರುವ ಫೀಲ್ಡ್ ಆಸ್ಪತ್ರೆಗಳನ್ನು ಸ್ಥಾಪಿಸಲು ಸಹ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ರೆಮ್ಡಿಸಿವಿರ್ ಕೊರತೆ ಆಗದಂತೆ ಎಚ್ಚರ ವಹಿಸಲಾಗುತ್ತಿದ್ದು, ಮುಂದಿನ 10 ದಿನಗಳಿಗೆ 2 ಲಕ್ಷ ಡೋಸ್ ಗಳಷ್ಟು ರೆಮ್ಡಿಸಿವಿರ್ ಒದಗಿಸುವಂತೆ ಮುಖ್ಯಮಂತ್ರಿ ಪ್ರಧಾನಿಗೆ ಮನವಿ ಮಾಡಿದರು.
ಬೆಂಗಳೂರಿನಲ್ಲಿ ಕೋವಿಡ್ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದ ಮುಖ್ಯಮಂತ್ರಿಗಳು, ನಗರದ 8 ವಲಯಗಳ ಕೋವಿಡ್ ನಿರ್ವಹಣೆ ಉಸ್ತುವಾರಿಗೆ ಸಚಿವರನ್ನು ನೇಮಕ ಮಾಡಲಾಗಿದೆ. ಹಿರಿಯ ಐಎಎಸ್ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ 82 ಲಕ್ಷ ಜನರಿಗೆ ಲಸಿಕೆ: ಲಸಿಕೆ ಕಾರ್ಯಕ್ರಮದ ಪ್ರಗತಿಯೂ ಉತ್ತಮವಾಗಿದ್ದು, ಈ ವರೆಗೆ 82 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ. ಮೇ 1 ರಿಂದ ಹೊಸ ಲಸಿಕಾ ನೀತಿ ಜಾರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳಿಗೂ ಲಸಿಕೆಗಳು ಸಮಾನವಾಗಿ ಹಂಚಿಕೆಯಾಗುವಂತೆ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಮನವಿ ಮಾಡಿದರು.

