ಈ ಸಾವುಗಳಿಗೆ ಯಾರು ಹೊಣೆ? ಈ ಸರ್ಕಾರ ನಂಬಿಕೆ ಕಳೆದುಕೊಂಡಿದೆ -ಡಿ.ಕೆ.ಶಿ

ಬೆಂಗಳೂರು: ಆಕ್ಸಿಜನ್ ಕೊರತೆಯಿಂದ 24 ಜನರ ಸಾವಿಗೆ ಹೊಣೆಯಾರು? ಈ ಸರ್ಕಾರ ನಂಬಿಕೆ ಕಳೆದುಕೊಂಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ.
ನಗರದ ಸದಾಶಿವನಗರ ನಿವಾಸದಲ್ಲಿ ಸೋಮವಾರ ಡಿಕೆ ಶಿವಕುಮಾರ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಇದು ಪ್ರಚಾರ ಪ್ರಿಯ ಸರ್ಕಾರ. ಈ ಸರ್ಕಾರದಿಂದಾಗಲಿ ಮುಖ್ಯಮಂತ್ರಿಗಳಿಂದಾಗಲಿ, ಮಂತ್ರಿಗಳಿಂದಾಗಲಿ ಈ ಪರಿಸ್ಥಿತಿ ನಿಭಾಯಿಸಲು ಆಗುತ್ತಿಲ್ಲ. ಅವರ ಆದ್ಯತೆಗಳೇ ಬೇರೆ. ನಮ್ಮ ಮರ್ಯಾದೆ ಹೋದರೂ ಪರವಾಗಿಲ್ಲ, ಶಾಸಕಾಂಗ ಪಕ್ಷದ ಸಭೆ ನಂತರ ನಾನೇ ಮುಖ್ಯಕಾರ್ಯದರ್ಶಿಗಳ ಸಮಾಯಾವಕಾಶ ಕೇಳಿ ಅವರು ಎಲ್ಲಿರುತ್ತಾರೋ ಅಲ್ಲಿಗೇ ಹೋಗಿ ಭೇಟಿ ಮಾಡಿ ಈ ರಾಜ್ಯದ ಜನತೆಗೆ ವಾಸ್ತವಾಂಶ ಏನಿದೆ ಎಂದು ತಿಳಿಸಲು ಕೇಳಿಕೊಳ್ಳುತ್ತೇನೆ ಎಂದು ಅವರು ಹೇಳಿದರು.
ಈ ಸಮಯದಲ್ಲಿ ನಾನು ಉದ್ಯಮಿಗಳು, ಸಂಘ-ಸಂಸ್ಥೆಗಳಿಗೆ ಮನವಿ ಮಾಡುತ್ತೇನೆ. ಜನರ ಜೀವ ಉಳಿಸಲು ನಿಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ನೆರವು ನೀಡಿ ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದರು.
ಸರ್ಕಾರ ಆಕ್ಸಿಜನ್ ಕೊರತೆಯಿಂದ ಸತ್ತಿಲ್ಲ ಎನ್ನುತ್ತಿದೆ ಎಂದರೆ ಮಾಧ್ಯಮಗಳು ಸುಳ್ಳು ವರದಿ ಪ್ರಸಾರ ಮಾಡಿವೆಯೇ? ನೀವು ತಪ್ಪು ಮಾಡಿದ್ದೀರಾ? ಅಥವಾ ಸರ್ಕಾರ ತಪ್ಪು ಮಾಡುತ್ತಿದೆಯಾ? ಇದೇ ಕಾರಣಕ್ಕೆ ಜನರಿಗೆ ವಾಸ್ತವಾಂಶ ತಿಳಿಸಿ ಎಂದು ಹೇಳುತ್ತಿದ್ದೇನೆ ಎಂದರು.
ಯಾರಿಗೆ ಆಗಲಿ ಪೂರ್ವ ಸಿದ್ಧತೆ, ಹೊಣೆಗಾರಿಕೆ ಇರಬೇಕು. ಇದ್ಯಾವುದು ಈ ಸರ್ಕಾರದಲ್ಲಿಲ್ಲ. ಆಕ್ಸಿಜನ್ ಕೊರತೆಯಿಂದ ಸತ್ತಿರುವ 24 ಜನರ ಕುಟುಂಬದ ಸದಸ್ಯರಿಗೆ ಯಾವ ರೀತಿ ಶಕ್ತಿ ತುಂಬಬೇಕೋ ತೋಚುತ್ತಿಲ್ಲ. ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿ ಎಂದು ನಾನು ಪಕ್ಷದ ಜಿಲ್ಲಾ ಸಮಿತಿಗೆ ಮನವಿ ಮಾಡುತ್ತೇನೆ ಎಂದು ಡಿಕೆ. ಶಿವಕುಮಾರ್ ತಿಳಿಸಿದರು.
ನಿಮ್ಮ ಕೈಯಲ್ಲಿ ಪರಿಸ್ಥಿತಿ ನಿಭಾಯಿಸಲು ಆಗದಿದ್ದರೆ ಅಧಿಕಾರ ಬಿಟ್ಟು ಹೋಗಿ ಎಂದು ಡಿಕೆಶಿ ಹೇಳಿದರು.