ಬೆಂಗಳೂರು: ಸುಪ್ರೀಂಕೋರ್ಟ್ 1,200 ಮೆಟ್ರಿಕ್ ಟನ್ ಆಮ್ಲಜನಕವನ್ನು ರಾಜ್ಯಕ್ಕೆ ಹಂಚಿಕೆ ಮಾಡಲು ಕೇಂದ್ರ ಸರಕಾರಕ್ಕೆ ಆದೇಶ ನೀಡಿದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಆಕ್ಸಿಜನ್ ಬೆಡ್‍ಗಳ ಪ್ರಮಾಣವನ್ನು 20,000 ಹೆಚ್ಚಿಸಲು ಮುಂದಾಗಿದೆ ಎಂದು ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಒಟ್ಟು 20,000 ಆಕ್ಸಿಜನ್ ಬೆಡ್‍ಗಳ ಪೈಕಿ ತಕ್ಷಣವೇ ತುರ್ತಾಗಿ 10,000 ಬೆಡ್ ವ್ಯವಸ್ಥೆ ಮಾಡಲಾಗುವುದು. ಇದರೊಂದಿಗೆ ರಾಜ್ಯದಲ್ಲಿ ಉಂಟಾಗಿರುವ ಆಕ್ಸಿಜನ್ ಬೆಡ್‍ಗಳ ಸಮಸ್ಯೆ ನೀಗಲಿದೆ ಎಂದರು.
ಕೋವಿಡ್ ಕೇರ್ ಸೆಂಟರ್‍ಗಳಲ್ಲೂ ಆಕ್ಸಿಜನ್ ಬೆಡ್ ಹಾಕಲು ನಿರ್ಧರಿಸಲಾಗಿದೆ. ಅಲ್ಲಿಗೆ ಅಗತ್ಯ ನುರಿತ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದ ಅವರು, ಸದ್ಯಕ್ಕೆ ಈಗ ರಾಜ್ಯದಲ್ಲಿ 70,000 ಬೆಡ್‍ಗಳನ್ನು ಕೋವಿಡ್‍ಗೆ ಮೀಸಲಾಗಿ ಇಡಲಾಗಿದ್ದು, ಈ ಪೈಕಿ ಸರಕಾರದಿಂದ 35,000 ಹಾಗೂ ಖಾಸಗಿ ಆಸ್ಪತ್ರೆಗಳ ವತಿಯಿಂದ 35,000 ಬೆಡ್‍ಗಳಿವೆ. ಈ ಒಟ್ಟು ಬೆಡ್‍ಗಳ ಪೈಕಿ 50,000 ಆಕ್ಸಿಜನ್ ಬೆಡ್‍ಗಳಿವೆ ಎಂದರು.
ಆಕ್ಸಿಜನ್ ಬೆಡ್‍ಗಳ ಕೊರತೆಯನ್ನು ನೀಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದ ಅವರು ಶೇ. 30ರಿಂದ 40ರಷ್ಟು ಗಂಭೀರವಲ್ಲದ ಸೋಂಕಿತರು ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿ ಆಕ್ಸಿಜನ್ ಬೆಡ್‍ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇವರನ್ನು ಕೂಡಲೇ ಸ್ಟೆಪ್‍ಡೌನ್ ಆಸ್ಪತ್ರೆಗಳಿಗೆ ಶಿಫ್ಟ್ ಮಾಡಲು ಸರಕಾರ ನಿರ್ಧರಿಸಿದೆ ಎಂದು ಡಿಸಿಎಂ ತಿಳಿಸಿದರು.
ಇನ್ನು ಮುಂದೆ 24 ಗಂಟೆ ಒಳಗಾಗಿ ಕೋವಿಡ್ ಪರೀಕ್ಷೆ ರಿಸಲ್ಟ್ ನೀಡಲಾಗುವುದು. ಯಾವ ಲ್ಯಾಬೇ ಆಗಿರಲಿ. ಅದು ಖಾಸಗಿಯಾಗಿರಲಿ ಅಥವಾ ಸರಕಾರದ್ದೇ ಆಗಿರಲಿ ಸರಕಾರ ನಿಗದಿ ಮಾಡಿದ ಸಮಯದೊಳಗೆ ಫಲಿತಾಂಶ ನೀಡದಿದ್ದರೆ ಪ್ರತಿ ಟೆಸ್ಟಿಗೆ 100ರಿಂದ 150 ರೂಪಾಯಿ ದಂಡ ವಿಧಿಸಲಾಗುವುದು ಎಂದು ಡಿಸಿಎಂ ಎಚ್ಚರಿಕೆ ನೀಡಿದರು.
20 ಸಾವಿರ ಆಕ್ಸಿಜನ್ ಬೆಡ್ ವ್ಯವಸ್ಥೆಗೆ ಸರಕಾರ ಮುಂದಾಗಿದೆ -ಡಾ.ಸಿ.ಎನ್.ಅಶ್ವತ್ಥನಾರಾಯಣ

