ಬೆಂಗಳೂರು: ಕರ್ನಾಟಕದ ಏಳಿಗೆಗೆ ರಾಜ್ಯ ಹಾಗೂ ಕೇಂದ್ರದ ಬಿಜೆಪಿ ಸರ್ಕಾರಗಳು ಡಬಲ್ ಇಂಜಿನ್ ರೀತಿ ಕೆಲಸ ಮಾಡುತ್ತವೆ ಎಂದು ಹೇಳಿದ್ದರು. ಆದರೆ ಕೋವಿಡ್ ನಿರ್ವಹಣೆ, ಆಕ್ಸಿಜನ್, ಲಸಿಕೆ ಪೂರೈಕೆ ವಿಚಾರದಲ್ಲಿ ಈ ಡಬಲ್ ಇಂಜಿನ್ ಗಳು ಕೆಟ್ಟು ನಿಂತಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ವಾಗ್ದಾಳಿ ನಡೆಸಿದರು.
ನಗರದ ಸದಾಶಿವನಗರ ನಿವಾಸದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಡಿಕೆ ಶಿವಕುಮಾರ್ ಮಾತನಾಡಿದರು.
ಲಸಿಕೆ ಉಚಿತವಾಗಿ ನೀಡುತ್ತೇವೆ ಎಂದರು. 18-44 ರ ವಯೋಮಾನದವರಿಗೆ ಲಸಿಕೆ ಅಂತಾ ಮೇ 1ರಂದು ಉದ್ಘಾಟನೆಯನ್ನೂ ಮಾಡಿದರು. ಇವತ್ತು ಲಸಿಕೆ ಕೊಡಲು ಆಗಲ್ಲ ಅಂತಿದ್ದಾರೆ. ರಾಜ್ಯ ಮತ್ತು ಕೇಂದ್ರದಲ್ಲಿರುವ ಡಬಲ್ ಇಂಜಿನ್ ಸರ್ಕಾರ ಬಹಳ ಚೆನ್ನಾಗಿ ಆಡಳಿತ ಮಾಡಲಿವೆ ಎಂದಿದ್ದರು. ಆದರೆ ಈ ಡಬಲ್ ಇಂಜಿನ್ ಗಳು ನಿಂತು ಹೋಗಿವೆ ಎಂದು ಡಿಕೆಶಿ ಟೀಕಿಸಿದರು.
ಚಾಮರಾಜನಗರದಲ್ಲಿ 24 ಜನರ ಸಾವಿಗೆ ಸರ್ಕಾರವೇ ಹೊಣೆ ಎಂದು ಹೈಕೋರ್ಟ್ ನೇಮಕ ಮಾಡಿದ್ದ ನ್ಯಾಯಮೂರ್ತಿಗಳ ಸಮಿತಿ ಈಗಾಗಲೇ ವರದಿ ಕೊಟ್ಟಿದೆ. ಈ ಸಾವುಗಳಿಗೆ ಸರ್ಕಾರ ನೈತಿಕ ಹೊಣೆ ಹೊರಬೇಕು ಎಂದರು.
ರಾಜ್ಯದಿಂದ ಆಯ್ಕೆಯಾಗಿರುವ 25 ಸಂಸದರನ್ನು ದೇವರೇ ಕಾಪಾಡಬೇಕು. ಇವರಲ್ಲಿ ಯಾರಾದರೂ ಒಬ್ಬರು ರಾಜ್ಯದ ಪರವಾಗಿ ಧ್ವನಿ ಎತ್ತಿದ್ದಾರಾ? ಜನರಿಗೆ ನೆರವಾಗಿದ್ದಾರಾ? ಎಂದು ಡಿಕೆಶಿ ಪ್ರಶ್ನಿಸಿದರು.
ಬಿಜೆಪಿ ಸರ್ಕಾರದ ಡಬಲ್ ಇಂಜಿನ್ ಕೆಟ್ಟು ನಿಂತಿದೆ -ಡಿ.ಕೆ. ಶಿವಕುಮಾರ್

