ಬೆಂಗಳೂರು: ಲಾಕ್ ಡೌನ್ ಸಂತ್ರಸ್ತರ ನೆರವಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಘೋಷಿಸಿರುವ 1250 ಕೋಟಿ ರೂ. ಪ್ಯಾಕೇಜ್ ಕೇವಲ ನೆಪಕ್ಕೆ ಮಾತ್ರ. ಬಡವರಿಗೆ ನೆರವಾಗುವ ಉದ್ದೇಶ ಇದರಲ್ಲಿ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಬುಧವಾರ ಡಿಕೆ ಶಿವಕುಮಾರ್ ಅವರು ಮಾತನಾಡಿದರು.
ಸರ್ಕಾರದ ಕೊರೋನಾ ಪರಿಸ್ಥಿತಿ ನಿರ್ವಹಣೆ ಬಗ್ಗೆ ನಂಬಿಕೆ ಇಲ್ಲ. ಕಳೆದ ಬಾರಿಯೂ ಇದೇ ರೀತಿ ಪರಿಹಾರ ಘೋಷಿಸಿದ್ದರು. ಚಾಲಕರು, ನೇಕಾರರು, ಸವಿತಾ ಸಮಾಜದವರಿಗೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ನೀಡಿಲ್ಲ ಎಂದರು.
ಬಡವರಿಗೆ ನೆರವಾಗುವ ಇಚ್ಛೆ ಸರಕಾರಕ್ಕೆ ಇರುವುದಾದರೆ ಕನಿಷ್ಠ ತಲಾ 10 ಸಾವಿರ ರೂ. ನೀಡಬೇಕು. ಪರಿಹಾರ ಮೊತ್ತ ವಿತರಣೆ ಜವಾಬ್ದಾರಿಯನ್ನು ಪಂಚಾಯ್ತಿಗೆ ನೀಡಲಿ. ಪಂಚಾಯ್ತಿ ಅವರು, ಪಾಲಿಕೆಯವರು ತಮ್ಮ ವ್ಯಾಪ್ತಿಯಲ್ಲಿರುವ ಸಾಂಪ್ರದಾಯಿಕ ವೃತ್ತಿ ಅವಲಂಬಿತರನ್ನು ಗುರುತಿಸಿ ಚೆಕ್ ಮೂಲಕ ಹಣ ನೀಡಿ ದಾಖಲೆಗೆ ಒಂದು ಫೆÇೀಟೋ ತೆಗೆದುಕೊಳ್ಳಲಿ ಎಂದರು.
ಈ ಪ್ಯಾಕೇಜ್ ಅಲ್ಲಿ ಘೋಷಿಸಿರುವ 2- 3 ಸಾವಿರ ಯಾವುದಕ್ಕೂ ಸಾಲುವುದಿಲ್ಲ. ನಾವು ಒತ್ತಡ ಹಾಕಿದ್ದೇವೆ ಎಂದು ಕಾಟಾಚಾರಕ್ಕೆ ಈ ಪ್ಯಾಕೇಜ್ ಘೋಷಿಸಲಾಗಿದೆ ಎಂದು ಹೇಳಿದರು.
ಇದು ಜನರ ಹಿತಕ್ಕಾಗಿ ಘೋಷಿಸಿದ ಪ್ಯಾಕೇಜ್ ಅಲ್ಲ. ರೈತರಿಗೆ ಬೆಂಬಲ ಬೆಲೆ ಏನಾದರೂ ಘೋಷಣೆ ಮಾಡಿದ್ದಾರಾ? ಬೆಲೆ ಕುಸಿತದಿಂದ ರೈತ ಕಂಗಾಲಾಗಿದ್ದಾನೆರೆಂದರು.
ಯಾರು ಕೆಲಸ ಕಳೆದುಕೊಂಡಿದ್ದಾರೆ ಎಂಬುದರ ಬಗ್ಗೆ ಸಮೀಕ್ಷೆ ಮಾಡಲಿ. ಕಟ್ಟಡ ಕಾರ್ಮಿಕರಿಗೂ ಇವರು ಕೊಟ್ಟಿರುವುದು ಏನೇನೂ ಸಾಲದು. ಇದು ಬಡವರ ಬಗ್ಗೆ ಚಿಂತಿಸುವ ಸರ್ಕಾರ ಅಲ್ಲ ಎಂದರು.
ನೆಪ ಮಾತ್ರದ ಪ್ಯಾಕೇಜ್ -ಡಿ.ಕೆ. ಶಿವಕುಮಾರ್

