ಬ್ಲ್ಯಾಕ್ ಫಂಗಸ್: ರಹಸ್ಯ ಚಿಕಿತ್ಸೆ ನೀಡುವಂತಿಲ್ಲ; ಮಾಹಿತಿ ಮುಚ್ಚಿಟ್ಟರೆ ಕಠಿಣ ಕ್ರಮ -ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ

ಮೈಸೂರು: ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಗೆ ತುತ್ತಾಗುವವರಿಗೆ ಆಸ್ಪತ್ರೆಗಳು ಗುಪ್ತವಾಗಿ ಚಿಕಿತ್ಸೆ ನೀಡುವಂತಿಲ್ಲ ಹಾಗೂ ಈ ಕಾಯಿಲೆಗೆ ತುತ್ತಾದವರು ಕೂಡಲೇ ಸರಕಾರಕ್ಕೆ ಮಾಹಿತಿ ನೀಡಲೇಬೇಕು ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಗುರುವಾರ ನಗರದಲ್ಲಿ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಅವರ ಆಶೀರ್ವಾದ ಪಡೆದ ನಂತರ ಡಿಸಿಎಂ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಕೋವಿಡ್ ಚಿಕಿತ್ಸೆ ಪಡೆದ ನಂತರ ಬರುತ್ತಿರುವ ಈ ಕಾಯಿಲೆ ಬಗ್ಗೆ ಸರಕಾರ ಹೆಚ್ಚು ನಿಗಾ ಇಟ್ಟಿದೆ. ಇದನ್ನು ಗಮನಕ್ಕೆ ತರಬೇಕಾದ ಕಾಯಿಲೆ ಎಂದು ಈಗಾಗಲೇ ಸರಕಾರ ಸ್ಪಷ್ಟ ಸೂಚನೆ ನೀಡಿದೆ. ಯಾವುದೇ ಖಾಸಗಿ ಆಸ್ಪತ್ರೆ ಯಾರಿಗೂ ತಿಳಿಯದಂತೆ ಚಿಕಿತ್ಸೆ ನೀಡುವುದು ಅಪರಾಧ. ಅದೇ ರೀತಿ ಈ ಕಾಯಿಲೆಗೆ ತುತ್ತಾದವರು ಸಹ ರಹಸ್ಯವಾಗಿ ಟ್ರೀಟ್ಮೆಂಟ್ ಪಡೆಯುವುದು ಕೂಡ ತಪ್ಪಾಗುತ್ತದೆ. ಮಾಹಿತಿ ಮುಚ್ಚಿಟ್ಟರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ಬ್ಲ್ಯಾಕ್ ಫಂಗಸ್‍ನಿಂದ ರಾಜ್ಯದಲ್ಲಿ ಸಾವುಗಳು ಆಗಿರುವ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಆದರೆ, ಸುಮಾರು ನೂರಕ್ಕೂ ಹೆಚ್ಚು ಜನ ಈ ಕಾಯಿಲೆಗೆ ತುತ್ತಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಅವರು ತಿಳಿಸಿದರು.
ಮೈಸೂರು, ಬೆಂಗಳೂರು. ಹುಬ್ಬಳ್ಳಿ, ಕಲಬುರಗಿ, ಮಂಗಳೂರು ಮತ್ತು ಶಿವಮೊಗ್ಗ ವಿಭಾಗಗಳಲ್ಲಿ ಈ ಕಾಯಿಲೆಗೆ ಉಚಿತವಾಗಿ ಚಿಕಿತ್ಸೆ ಕೊಡಲಾಗುತ್ತಿದೆ. ಜತೆಗೆ, ಇದಕ್ಕೆ ಅಗತ್ಯವಾದ ಲೈಸೋಸೋಮಲ್ ಅಮಪೆÇೀಟೆರಿಸನ್ ಔಷಧಿ ನಮ್ಮ ದೇಶದಲ್ಲಿ ತಯಾರಾಗುತ್ತಿರಲಿಲ್ಲ. ಈಗ ನಮ್ಮಲ್ಲೇ ತಯಾರಿಕೆ ಮಾಡುವ ವ್ಯವಸ್ಥೆ ಮಾಡಲಾಗುತ್ತಿದ್ದು, ಇನ್ನು ಕೆಲ ದಿನಗಳಲ್ಲಿಯೇ ಹೆಚ್ಚಿನ ಪ್ರಮಾಣದ ಔಷಧಿ ರಾಜ್ಯಕ್ಕೆ ಲಭ್ಯವಾಗಲಿದೆ ಎಂದವರು ತಿಳಿಸಿದರು.
ಯಾವುದೇ ಕಾರಣಕ್ಕೂ ಕೋವಿಡ್ ಪರೀಕ್ಷೆಗಳ ಪ್ರಮಾಣವನ್ನು ಕಡಿಮೆ ಮಾಡಿಲ್ಲ. ನಿಗದಿತ ಗುರಿಗಿಂತ ಹೆಚ್ಚೇ ಮಾಡಲಾಗುತ್ತಿದೆ. ಅದಕ್ಕಾಗಿ ಕೆಲ ಸುಧಾರಣೆಗಳನ್ನು ತರಲಾಗಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.