ನಾವು ಮಾಡಿದ ಕರ್ಮ ನಮ್ಮನ್ನು ಹಿಂಬಾಲಿಸಿಕೊಂಡು ಬಂದು ಪಾಠ ಕಲಿಸುತ್ತವೆ ಎಂಬುದಕ್ಕೆ ಜಿಂದಾಲ್ ಸಾಕ್ಷಿ -ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ನಾವು ಮಾಡಿದ ಕರ್ಮಗಳು ನಮ್ಮನ್ನು ಹಿಂಬಾಲಿಸಿಕೊಂಡು ಬಂದು ಪಾಠ ಕಲಿಸುತ್ತವೆ ಎಂಬುದಕ್ಕೆ ಜಿಂದಾಲ್ ಸಾಕ್ಷಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಜಿಂದಾಲ್ ಕಂಪನಿಗೆ ಬಿಜೆಪಿ ಸರ್ಕಾರ ಭೂಮಿ ನೀಡಿರುವುದರ ಕುರಿತು ಹೆಚ್ ಡಿಕೆ ಟ್ವೀಟ್ ಮಾಡಿದ್ದಾರೆ.
ಜಿಂದಾಲ್‍ಗೆ ಲೀಸ್ ಕಂ ಸೇಲ್ ಆಧಾರದಲ್ಲಿ ಭೂಮಿ ನೀಡಲಾಗಿತ್ತು. ಲೀಸ್ ಅವಧಿ ಮುಗಿದಿದ್ದರಿಂದ ಕ್ರಯಪತ್ರ ಮಾಡಿಕೊಡಬೇಕಾಗಿತ್ತು. ಅಷ್ಟನ್ನು ಮಾತ್ರ ಮಾಡಲು ಮುಂದಾಗಿದ್ದ ನನ್ನ ಸರ್ಕಾರದ ವಿರುದ್ಧ ಯಡಿಯೂರಪ್ಪನವರು ಇಲ್ಲ ಸಲ್ಲದ ಆರೋಪ ಮಾಡಿದ್ದರು. ಆದರೆ ಈಗ? ಅವರು ಅಂದು ನನ್ನ ಮೇಲೆ ಮಾಡಿದ ಆರೋಪಗಳನ್ನೆಲ್ಲ ತಮ್ಮ ಮೇಲೆ ಹೊತ್ತುಕೊಳ್ಳುವಂಥಾಗಿದೆ ಎಂದು ತಿಳಿಸಿದ್ದಾರೆ.
ವಿರೋಧಕ್ಕಾಗಿ ವಿರೋಧ ಮಾಡುವುದು, ವಿರೋಧ ಪಕ್ಷದಲ್ಲಿದ್ದಾಗ ವಿರೋಧಿಸಿದ್ದನ್ನೇ ಆಡಳಿತಕ್ಕೆ ಬಂದಾಗ ಕದ್ದು ಮುಚ್ಚಿ ಮಾಡುವುದು ಬಿಜೆಪಿ ಪಾಲಿಸಿಕೊಂಡು ಬಂದ ಈ ಸಂಸ್ಕೃತಿ ಇಂದು ಅವರಿಗೆ ತಿರುಗುಬಾಣವಾಗಿದೆ. ನಾವು ಮಾಡಿದ ಕರ್ಮಗಳು ನಮ್ಮನ್ನು ಹಿಂಬಾಲಿಸಿಕೊಂಡು ಬಂದು ಪಾಠ ಕಲಿಸುತ್ತವೆ ಎಂಬುದಕ್ಕೆ ಜಿಂದಾಲ್ ಸಾಕ್ಷಿ ಎಂದು ಹೆಚ್ ಡಿಕೆ ಟ್ವೀಟ್ ಮಾಡಿದ್ದಾರೆ.
ಜಿಂದಾಲ್ ಕಂಪನಿಗೆ 3667 ಎಕರೆ ಭೂಮಿ ನೀಡಲು ನಿರ್ಧರಿಸಿದ್ದ ಬಿಜೆಪಿ ಸರ್ಕಾರ ಈಗ ತನ್ನೊಳಗಿನ ಬಂಡಾಯದಿಂದ, ಅನಿವಾರ್ಯವಾಗಿ ಹಿಂದೆ ಸರಿದಿದೆ. ರಾಜಕೀಯ ಪಕ್ಷವೊಂದು ದ್ವಿಮುಖ ಧೋರಣೆಯ ರಾಜಕಾರಣ ಮಾಡಬಾರದು ಎಂಬುದಕ್ಕೆ ಇದೊಂದು ನಿದರ್ಶನ. ಹಿಂದೆ ಮಾಡಿದ್ದರ ಪಾಪದ ಫಲವನ್ನು ಬಿಜೆಪಿ ಇಂದು ಅನುಭವಿಸುವಂತಾಗಿದೆ ಎಂದಿದ್ದಾರೆ ಹೆಚ್ ಡಿಕೆ.