ಬೆಂಗಳೂರು: ರಾಜ್ಯ ಸರ್ಕಾರ ಖರೀದಿಸಿದ ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳಿಗೆ ಸರಬರಾಜು ಮಾಡಿ, ದುಬಾರಿ ಬೆಲೆಗೆ ಮಾರುತ್ತಿರುವ ಹಗರಣದ ಬಗ್ಗೆ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳು ಮಧ್ಯ ಪ್ರವೇಶಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮನವಿ ಮಾಡಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಜತೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಶನಿವಾರ ಅವರು ಮಾತನಾಡಿದರು.
ಇನ್ನು ಬೆಳಗ್ಗೆಯಿಂದ ಮಾಧ್ಯಮದಲ್ಲಿ ಬಂದಿರುವ ವರದಿ ಪ್ರಕಾರ, ಸರ್ಕಾರದಿಂದ ಖರೀದಿಸಿದ ಲಸಿಕೆಯನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸಿ ಅದನ್ನು 900 ರಿಂದ 1200 ರುಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ ಆಡಳಿತ ಪಕ್ಷದವರು ಷಾಮೀಲಾಗಿದ್ದಾರೆ. ಈ ವಿಚಾರದಲ್ಲಿ ಕರ್ನಾಟಕ ಹೈಕೋಟ್ ನ ಮುಖ್ಯ ನ್ಯಾಯಮೂರ್ತಿಗಳು ಮಧ್ಯ ಪ್ರವೇಶಿಸಬೇಕು. ಪ್ರಕರಣದ ಬಗ್ಗೆ ದೂರು ದಾಖಲಿಸಿ ವಿಚಾರಣೆ ನಡೆಸಬೇಕು ಎಂದು ರಾಜ್ಯದ ಜನರ ಪರವಾಗಿ ಮನವಿ ಮಾಡುತ್ತೇನೆಂದರು.
ಬೆಡ್ ಹಗರಣ ಬೆಳಕಿಗೆ ಬಂತು. ಬಿಜೆಪಿ ನಾಯಕರು ಒಂದು ಸಮುದಾಯವನ್ನು ಗುರಿಯಾಗಿಸಿ ಟೀಕೆ ಮಾಡಿದ್ದರು. ಆದರೆ ಈ ಹಗರಣಕ್ಕೆ ಸಂಬಂಧಿಸಿದಂತೆ ಈಗ ಬಂಧನ ಆಗಿರುವವರು ಯಾರು? ಎಂಬುದನ್ನು ಅವರೇ ಹೇಳಬೇಕು ಎಂದರು.
ನವೆಂಬರ್ 30ರಂದು 2ನೇ ಅಲೆ ಬಗ್ಗೆ ಎಚ್ಚರಿಕೆ ಬಂದಿದ್ದರೂ ಸರ್ಕಾರ ಮುಂಜಾಗ್ರತಾ ಕ್ರಮ ಕೈಗೊಳ್ಳದ ಕಾರಣ ಲಕ್ಷಾಂತರ ಮಂದಿ ಮೃತಪಟ್ಟಿದ್ದಾರೆ. 3ನೇ ಅಲೆ ಮಕ್ಕಳಿಗೆ ಅಪಾಯ ತರುವ ಆತಂಕ ಇರುವ ಹಿನ್ನೆಲೆಯಲ್ಲಿ ಮಹಿಳೆಯರು ತಮ್ಮ ಮಕ್ಕಳ ರಕ್ಷಣೆ ಮಾಡಿಕೊಳ್ಳಬೇಕು ಎಂದು ಮಹಿಳಾ ಘಟಕ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಡಿಕೆಶಿ ತಿಳಿಸಿದರು.
ರಾಜ್ಯದ ಎಲ್ಲ ತಾಲೂಕುಗಳಲ್ಲೂ ಮಕ್ಕಳ ರಕ್ಷಣೆಗಾಗಿ ಮೆಡಿಕಲ್ ಕಿಟ್ ನೀಡುವ ಕೆಲಸ ಮಾಡುತ್ತಿದ್ದಾರೆ. ನಾನು, ಶಾಸಕಾಂಗ ಪಕ್ಷದ ನಾಯಕರು, ಕಾರ್ಯಾಧ್ಯಕ್ಷರು ಈ ಪವಿತ್ರ ಕಾರ್ಯಕ್ರಮ ಬೆಂಬಲಿಸಲಿದ್ದೇವೆ ಎಂದು ಹೇಳಿದರು.
ಚಾಮರಾಜನಗರ ಆಕ್ಸಿಜನ್ ಪ್ರಕರಣದಲ್ಲಿ ಮಾನ್ಯ ಹೈಕೋರ್ಟ್ ರಾಜ್ಯದ ಜನರಿಗೆ ನ್ಯಾಯ ಒದಗಿಸಿದೆ. ದೇಶದಲ್ಲಿ ನ್ಯಾಯ ಬದುಕಿದೆ ಅಂತಾ ನ್ಯಾಯಾಲಯ ಸಾಬೀತುಪಡಿಸಿದೆ. ಈ ಸರ್ಕಾರಕ್ಕೆ ಕಿವಿ, ಕಣ್ಣು, ಹೃದಯವಿಲ್ಲ. ಇದು ಮಾನವೀಯತೆ ಇಲ್ಲದ ಸರ್ಕಾರ ಎಂದು ಡಿಕೆಶಿ ಟೀಕಿಸಿದರು.
ಲಸಿಕೆ ಹಗರಣ: ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳ ಮಧ್ಯಪ್ರವೇಶಕ್ಕೆ ಡಿ.ಕೆ. ಶಿವಕುಮಾರ್ ಮನವಿ

