ಸರ್ಕಾರ ಮೊದಲು ತನ್ನ ಸಲಹೆಗಾರರ ಮಾತು ಕೇಳುತ್ತದೆಯೇ- ಡಿ.ಕೆ ಶಿವಕುಮಾರ್ ಪ್ರಶ್ನೆ

ಬೆಂಗಳೂರು: ಲಸಿಕೆ ವಿಚಾರದಲ್ಲಿ ಸರ್ಕಾರ ತನ್ನ ಸಲಹೆಗಾರರಾದ ಗಗನ್ ದೀಪ್ ಕಾಂಗ್ ಅವರ ಮಾತು ಕೇಳಿದರೆ ಸಾಕು, ಪರಿಣಾಮಕಾಯಾಗಿ ಲಸಿಕೆ ವಿತರಣೆ ಮಾಡಬಹುದು. ಆದರೆ ಸರ್ಕಾರ ತನ್ನ ಸಲಹೆಗಾರರ ಮಾತನ್ನು ಒಪ್ಪಲು ಸಿದ್ಧವಿದೆಯೇ?’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ.
ಕಾಂಗ್ ಅವರು ಖ್ಯಾತ ವೈರಾಣು ತಜ್ಞರಾಗಿದ್ದು, ಕಳೆದ ತಿಂಗಳು ರಾಜ್ಯ ಸರ್ಕಾರ ಇವರನ್ನು ಲಸಿಕೆ ತಾಂತ್ರಿಕ ಸಲಹೆಗಾರರನ್ನಾಗಿ ನೇಮಕ ಮಾಡಿಕೊಂಡಿತ್ತು. ಆದರೆ ಸಲಹೆಗಾರರ ಅಭಿಪ್ರಾಯಕ್ಕೂ ಸರ್ಕಾರದ ನಿರ್ಧಾರಗಳಿಗೂ ಹೊಂದಾಣಿಕೆಯೇ ಆಗುತ್ತಿಲ್ಲ. ಹೀಗಾಗಿ ಸರ್ಕಾರ ಕೇವಲ ಪ್ರಚಾರಕ್ಕೆ ಮಾತ್ರ ಸಲಹೆಗಾರರನ್ನು ನೇಮಕ ಮಾಡಿಕೊಂಡಿದೆ ಎಂಬುದು ಸ್ಪಷ್ಟವಾಗುತ್ತಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ ಅವರು ಕೋವಿಡ್ ನಿರ್ವಹಣೆ ವಿಚಾರವಾಗಿ ವ್ಯಕ್ತಪಡಿಸಿರುವ 10 ಅಂಶಗಳನ್ನು ಡಿ.ಕೆ. ಶಿವಕುಮಾರ್ ಅವರು ಉಲ್ಲೇಖಿಸಿ, ಕಾಂಗ್ ಅವರ ಅಭಿಪ್ರಾಯಗಳನ್ನು ಸರ್ಕಾರ ಪರಿಗಣಿಸುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.
ದೇಶದಲ್ಲಿ ಎರಡನೇ ಅಲೆ ವಿಚಾರವಾಗಿ ಭಾರತ ಸರ್ಕಾರದ ನಿರ್ಲಕ್ಷ್ಯವನ್ನು ಡಾ. ಕಾಂಗ್ ಅವರು ಪ್ರಶ್ನಿಸಿದ್ದರು. ಸೋಂಕು ಹೆಚ್ಚಳದ ಬಗ್ಗೆ ನಾವು ಆರಂಭದಲ್ಲೇ ಗಮನ ಹರಿಸಬೇಕಿತ್ತು. ಕಡೇ ಪಕ್ಷ ಮಾರ್ಚ್ ಆರಂಭದಲ್ಲಾದರೂ ನಾವು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಆದರೆ ನಾವದನ್ನು ಮಾಡಲಿಲ್ಲ ಎಂದು ಹೇಳಿದ್ದಾರೆಂದರು.
ಕಳಪೆ ಅಂಕಿ-ಅಂಶಗಳಿಂದಾಗಿ ಭಾರತದಲ್ಲಿ ಲಸಿಕೆ ಕಾರ್ಯಕ್ರಮದ ಪರಿಣಾಮವನ್ನು ಅಳೆಯಲು ಸಾಧ್ಯವಾಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆಂದಿದ್ದಾರೆ.
ಈ ಎಲ್ಲ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರವು ಬಿಜೆಪಿ ನಾಯಕರು ಕಾಳಸಂತೆಯಲ್ಲಿ ಲಸಿಕೆ ಮಾರಿಕೊಳ್ಳಲು ಅವಕಾಶ ನೀಡುವುದನ್ನು ಬಿಟ್ಟು, ಕೋವಿಡ್ ನಿರ್ವಹಣೆ ವಿಚಾರದಲ್ಲಿ ಮೊದಲು ತನ್ನ ಸಲಹೆಗಾರರ ಮಾತನ್ನು ಕೇಳಬೇಕಿದೆ ಎಂದು ಡಿ.ಕೆ. ಶಿವಕುಮಾರ್ ಅವರು ಆಗ್ರಹಿಸಿದ್ದಾರೆ.