ಮೈಸೂರು: ಕಡಕೊಳ ಜಗದೀಶ್ ಅಭಿಮಾನಿ ಬಳಗ ಮತ್ತು ಡಿಟಿಎಸ್ ಫೌಂಡೇಶನ್ ವತಿಯಿಂದ ರೈತರ ಸಂಕಷ್ಟಕ್ಕೆ ನೆರವಾಗಲು ರೈತರಿಂದ ನೇರವಾಗಿ ತರಕಾರಿ ಖರೀದಿಸಿ ಅದನ್ನು ಅಸಹಾಯಕರಿಗೆ ಉಚಿತವಾಗಿ ವಿತರಿಸುವ ಕಾರ್ಯವನ್ನು ಗುರುವಾರ ಚಾಮುಂಡಿಪುರಂ ಅಪೂರ್ವ ಹೋಟೆಲ್ ನ ಮುಂಭಾಗ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಮಾತನಾಡಿ, ವಿನೂತನ ಪ್ರಯೋಗ ಸಾರ್ವಜನಿಕರಿಗೆ ಮತ್ತು ವಿಶೇಷವಾಗಿ ರೈತರಿಗೆ ಅನುಕೂಲವಾಗುವಂತಹ ಒಂದು ಒಳ್ಳೆಯ ಕೆಲಸವನ್ನು ಕೋವಿಡ್ ಎರಡನೆ ಅಲೆಯ ಮಧ್ಯದಲ್ಲಿ ಜಗದೀಶ್ ಮತ್ತು ಡಿ.ಟಿ.ಎಸ್ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದಾರೆಂದರು.
ಇವತ್ತು ರೈತ ಬೆಳೆದ ಬೆಳೆ ಕೈಗೆ ಬಂದಿದೆ. ಆದರೆ ಬೆಲೆ ಪ್ರಶ್ನೆ ಇರಲಿ, ಮಾರಾಟವನ್ನೇ ಮಾಡಲು ಸಾಧ್ಯವಾಗುತ್ತಿಲ್ಲ. ಶೂನ್ಯ ಸ್ಥಿತಿ ತಲುಪಿರತಕ್ಕ ದುಸ್ಥಿತಿಗೆ ಬಂದಿದ್ದು ಲಾಕ್ ಡೌನ್ ಕಾರಣಕ್ಕಾಗಿ ಅಂತಹ ಒಂದು ಸ್ಥಿತಿಯಲ್ಲಿ ರೈತರಿಂದ ನೇರವಾಗಿ ಖರೀದಿ ಮಾಡಿ ಅದನ್ನು ಸಾರ್ವಜನಿಕರಿಗೆ ಉಚಿತವಾಗಿ ವಿತರಿಸುವ ಒಳ್ಳೆಯ ಕಾರ್ಯ ನಡೆಯುತ್ತಿದೆ. ಇದು ಶ್ಲಾಘನೀಯ ಕಾರ್ಯ ಎಂದರು.
ತಾಜಾ ತರಕಾರಿಯನ್ನು ಉಚಿತವಾಗಿ ವಿತರಿಸುವ ಮೂಲಕ ಒಂದು ಕಡೆ ಗ್ರಾಹಕರು, ಸಾರ್ವಜನಿಕರಿಗೆ ತಲುಪಿಸುವ ವ್ಯವಸ್ಥೆ, ರೈತರಿಗೆ ಬೆನ್ನೆಲುಬಾಗಿ ನಿಲ್ಲುವ ಕೆಲಸವನ್ನು ಡಿಟಿಎಸ್ ಫೌಂಡೇಶನ್, ಜಗದೀಶ್ ಮತ್ತು ಗೆಳೆಯರು ಮಾಡಿರುವುದಕ್ಕೆ ನನ್ನ ಕೃತಜ್ಞತೆ ಎಂದರು.
ಸಾರ್ವಜನಿಕರು ಯಾವುದೇ ಸಂಕೋಚವಿಲ್ಲದೆ, ಈ ಆಹಾರ ಪದಾರ್ಥವನ್ನು ಇಲ್ಲಿ ಬಂದು ಸರದಿಯಲ್ಲಿ ಬಂದು ಪಡೆಯಿರಿ ಎಂದು ರಾಜೀವ್ ತಿಳಿಸಿದರು.
ಡಿ.ಟಿ.ಪ್ರಕಾಶ್ ಮಾತನಾಡಿ ಇಡೀ ಪ್ರಪಂಚವೇ ಸಂಕಷ್ಟದಲ್ಲಿ ಸಿಲುಕಿರುವಾಗ ಒಬ್ಬರಿಗೊಬ್ಬರು ಸಹಾಯ ಮಾಡಿ ಪರಿಸ್ಥಿತಿಯನ್ನು ನಿಭಾಯಿಸಬೇಕೇ ಹೊರತು ನಮ್ಮ ಪಾಡಿಗೆ ನಾವು ಇದ್ದರೆ ಆಗಲ್ಲ, ಹೋದ ವಾರ ಕೂಡ ತರಕಾರಿಯನ್ನು ಕೊಟ್ಟಿದ್ದೇವೆ. ಲಾಕ್ ಡೌನ್ ತೆರೆದಿರುವುದರಿಂದ ತರಕಾರಿ ಕೊಡುತ್ತಿದ್ದೇವೆ. ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಂಡು ಸದುಪಯೋಗಪಡಿಸಿಕೊಳ್ಳಿ ಎಂದರು.
ಟೊಮೆಟೊ-1ಟನ್, ಕೋಸು – 1ಟನ್ ,ಮಂಗಳೂರು ಸೌತೆಕಾಯಿ -1ಟನ್,ದಪ್ಪ ಮೆಣಸಿನಕಾಯಿ -1ಟನ್, ಕುಂಬ್ಳಕಾಯಿ -1ಟನ್ ನ್ನು ರೈತರಿಂದ ಖರೀದಿಸಿ ಉಚಿತವಾಗಿ ವಿತರಿಸಲಾಯಿತು.
ಕಡಕೊಳ ಜಗದೀಶ್, ಅಜಯ್ ಶಾಸ್ತ್ರಿ ಅಪೂರ್ವ ಸುರೇಶ್, ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಚಕ್ರಪಾಣಿ, ಸುಚೇಂದ್ರ, ವಿನಯ್ ಕಣಗಾಲ್ ಇನ್ನಿತರರು ಉಪಸ್ಥಿತರಿದ್ದರು.

