ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ -ಎಸ್.ಟಿ.ಸೋಮಶೇಖರ್

ಮೈಸೂರು: ಲಸಿಕೆ ಪಡೆದುಕೊಳ್ಳುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ. ಹೀಗಾಗಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಿ ಹಾಗೂ ಲಸಿಕೆಯನ್ನು ಪಡೆದುಕೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಮೇಟಿಕುಪ್ಪೆಯ ಹಾಡಿ ಜನರಿಗೆ ಲಸಿಕೆಯ ಬಗ್ಗೆ ಅರಿವು ಮೂಡಿಸಿದರು.
ಶುಕ್ರವಾರ ಹೆಚ್.ಡಿ.ಕೋಟೆಯ ಮೇಟಿಕುಪ್ಪೆಯ ಹಾಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಲಸಿಕೆಯನ್ನು ಪಡೆದುಕೊಳ್ಳುವುದರಿಂದ ಸಾವುಗಳು ಉಂಟಾಗುವುದಿಲ್ಲ. ಈಗಾಗಲೇ ದೇಶದಲ್ಲಿ ಹಲವಾರು ಮಂದಿ ಲಸಿಕೆಯನ್ನು ಪಡೆದಿದ್ದಾರೆ. ಇದರಿಂದ ಯಾರಿಗೂ ಯಾವ ತೊಂದರೆಯು ಉಂಟಾಗಿಲ್ಲ ಎಂದು ತಿಳಿಸಿದರು.
ಹಳ್ಳಿಗಳಲ್ಲಿ ಕೋವಿಡ್ ಪ್ರಕರಣಗಳನ್ನು ತಗ್ಗಿಸಲು ಇಂದು ವೈದ್ಯರ ನಡಿಗೆ ಹಳ್ಳಿಯ ಕಡೆ ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಇಂದಿನಿಂದ ವೈದ್ಯರ ತಂಡವು ಹಳ್ಳಿಗಳ ಕಡೆ ತೆರಳಲಿದ್ದು, ಜೊತೆಗೆ ಅದೆ ವೈದ್ಯರ ತಂಡವನ್ನು ಹಾಡಿಗಳಿಗೆ ಭೇಟಿ ನೀಡಲು ಸೂಚಿಸಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮೇಟಿಕುಪ್ಪೆಯ ಹಾಡಿ ಜನರು ಸಚಿವರಾದ ಎಸ್.ಟಿ.ಸೋಮಶೇಖರ್ ಅವರಿಗೆ ಮನವಿಯನ್ನು ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಕೋವಿಡ್ ಮುಗಿದ ಬಳಿಕ ಮತ್ತೊಮ್ಮೆ ಬಂದಾಗ ಇದಕ್ಕೆ ಸೂಕ್ತ ಪರಿಹಾರವನ್ನು ನೀಡಲಾಗಿವುದು ಎಂದರು.
ಇದಕ್ಕೂ ಮುನ್ನ ಹೆಚ್.ಡಿ.ಕೋಟೆಯ ಏಕಲವ್ಯ ವಸತಿ ಶಾಲೆಯ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿ ಸೋಂಕಿತರ ಅಹವಾಲು ಸ್ವೀಕರಿಸಿದರು. ಬಿಸಿ ನೀರಿನ ವ್ಯವಸ್ಥೆ ಸೇರಿದಂತೆ ಯಾವುದೇ ಸೌಲಭ್ಯಗಳಿಂದ ವಂಚಿತರಾಗಬಾರದು. ಮತ್ತೊಮ್ಮೆ ಈ ಕಡೆ ಬಂದಾಗ ಯಾವುದೇ ದೂರುಗಳು ಬರಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಶಾಸಕ ಅನೀಲ್ ಚಿಕ್ಕಮಾದು, ತಹಶಿಲ್ದಾರ್ ನರಗುಂದ, ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಅಪ್ಪಣ್ಣ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್, ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ, ಕಾಂಪೆÇೀಸ್ಟ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಹದೇವಯ್ಯ, ಮೃಗಾಲಯದ ಪ್ರಾಧಿಕಾರದ ಅಧ್ಯಕ್ಷ ಮಹದೇವಸ್ವಾಮಿ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ, ಖಾದಿ ಬೋರ್ಡ್ ಅಧ್ಯಕ್ಷ ಕೃಷ್ಣಪ್ಪ ಗೌಡ, ಗ್ರಾಮಾಂತರ ಜಿಲ್ಲಾ ಬಿಜೆಪಿಯ ಅಧ್ಯಕ್ಷರಾದ ಮಂಗಳ ಸೋಮಶೇಖರ್ ಸೇರಿದಂತೆ ಇತರರು ಹಾಜರಿದ್ದರು.