ಬೆಂಗಳೂರು: 2020-21ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯನ್ನು ರದ್ದು ಮಾಡಿರುವುದರಿಂದ ಎಂಜಿನಿರಿಂಗ್ ಸೇರಿದಂತೆ ಎಲ್ಲ ವೃತ್ತಿಪರ ಉನ್ನತ ಶಿಕ್ಷಣ ಕೊರ್ಸುಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಅಂಕಗಳನ್ನು ಮಾತ್ರ ಪರಿಗಣನೆ ಮಾಡಲು ಸರಕಾರ ತೀರ್ಮಾನಿಸಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರಕಟಿಸಿದರು.
ಈ ಸಂಬಂಧ ಬೆಂಗಳೂರಿನಲ್ಲಿ ಮಂಗಳವಾರ ಉನ್ನತ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ ನಂತರ ಅವರು ಈ ವಿಷಯವನ್ನು ಸುದ್ದಿಗೋಷ್ಠಿ ನಡೆಸಿ ತಿಳಿಸಿದರು.
ಸಿಇಟಿ, ನೀಟ್ ಸೇರಿ ರಾಜ್ಯದಲ್ಲಿ ನಡೆಯುವ ಎಲ್ಲ ವೃತ್ತಿಪರ ಕೋರ್ಸುಗಳಿಗೆ ಪಿಯುಸಿ ಅಂಕವನ್ನು ಪರಿಗಣನೆ ಮಾಡದಿರಲು ನಿರ್ಧರಿಸಲಾಗಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಎಸ್.ಸುರೇಶ್ ಕುಮಾರ್ ಅವರು ಈ ನಿಟ್ಟಿನಲ್ಲಿ ನೀಡಿದ್ದ ಸಲಹೆಯನ್ನು ಪರಿಗಣಿಸಲಾಗಿದೆ ಎಂದು ಅವರು ಹೇಳಿದರು.
ಈಗಾಗಲೇ ಘೋಷಣೆ ಮಾಡಿರುವಂತೆ ಆ. 28, 29 ಹಾಗೂ 30ರಂದು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಯಲಿದ್ದು, ದ್ವಿತೀಯ ಪಿಯುಸಿ (ವಿಜ್ಞಾನ) ಪಾಸಾದ ಪ್ರತೀ ವಿದ್ಯಾರ್ಥಿಯೂ ಸಿಇಟಿ ಬರೆಯಲು ಅವಕಾಶವಿದೆ ಎಂದು ಅವರು ತಿಳಿಸಿದರು.
ಎಲ್ಲ ಐಚ್ಛಿಕ ವಿಷಯಗಳ ಪರೀಕ್ಷೆ 28 ಮತ್ತು 29ರಂದು ನಡೆಯುತ್ತದೆ. ಉಳಿದಂತೆ ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಆ. 30ರಂದು ಪರೀಕ್ಷೆ ನಡೆಯಲಿದೆ. ಮೊದಲು ಯಾವ ಪದ್ಧತಿಯಲ್ಲಿ ಪರೀಕ್ಷೆ ನಡೆಯುತ್ತಿತ್ತೋ ಅದೇ ರೀತಿ ಪರೀಕ್ಷೆ ನಡೆಯುತ್ತದೆ. ಪ್ರತಿ ವಿಷಯಕ್ಕೆ 60 ಅಂಕ ಇರುತ್ತದೆ. ಮೊದಲ ದಿನ ಗಣಿತ ಮತ್ತು ಜೀವಶಾಸ್ತ್ರ ಹಾಗೂ ಎರಡನೇ ದಿನ ಭೌತವಿಜ್ಞಾನ ಮತ್ತು ರಾಯನಿಕ ವಿಜ್ಞಾನ ಇರುತ್ತದೆ ಎಂದರು
ಸಿಇಟಿಯಲ್ಲಿ ಎಂಜಿನೀಯರಿಂಗ್, ಪಶುವೈದ್ಯ, ಕೃಷಿ ವಿಜ್ಞಾನ, ಆರ್ಕಿಟೆಕ್ಟ್, ಫಾರ್ಮಸಿ ಪ್ರವೇಶ ಪರೀಕ್ಷೆಗೆ ಇದ್ದ ಅರ್ಹ ಅಂಕಗಳ ಷರತ್ತನ್ನು ತೆಗೆದು ಹಾಕಲಾಗಿದೆ. ಕೇವಲ ಸಿಇಟಿ ಅಂಕಗಳ ಆಧಾರದ ಮೇಲೆ ಮಾತ್ರ ರಾಂಕ್ ಕೊಡಲಾಗುವುದು ಎಂದು ತಿಳಿಸಿದರು.
ವೃತ್ತಿಪರ ಎಂಜಿನಿಯರಿಂಗ್ ಕೋರ್ಸ್‍ಗೆ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ವಿಷಯಗಳಲ್ಲಿ ಸಿಇಟಿ ಬರೆಯಲು ಸಾಮಾನ್ಯ ಅಭ್ಯರ್ಥಿಗಳು ಕನಿಷ್ಠ ಶೇ. 45 ಹಾಗೂ ಪರಿಶಿಷ್ಟ ಜಾತಿ-ವರ್ಗದ ಅಭ್ಯರ್ಥಿಗಳು ಶೇ. 40ರಷ್ಟು ಅಂಕಗಳನ್ನು ಗಳಿಸಬೇಕೆಂಬ ಷರತ್ತು ಇತ್ತು. ಆದ್ದರಿಂದ ಪಿಸಿಎಂ ಹಾಗೂ ನಿಗದಿತ ಐಚ್ಛಿಕ ವಿಷಯಗಳಲ್ಲಿ ಉತ್ತೀರ್ಣರಾಗಿರುವ ಎಲ್ಲ, ಅಂದರೆ ಜಸ್ಟ್ ಪಾಸ್ ಆಗಿರುವ ವಿದ್ಯಾರ್ಥಿಗಳು ಕೂಡ ಸಿಇಟಿ ಬರೆಯಲು ಅರ್ಹತೆ ಹೊಂದಿರುತ್ತಾರೆ. ಅಂಕಗಳ ಮಿತಿ ಸಡಿಲಿಕೆ ಮಾಡಿರುವ ಬಗ್ಗೆ ಎಲ್ಲ ಸಂಬಂಧಿತ ಪರೀಕ್ಷಾ ಮಂಡಳಿಗಳು, ಇನ್ನಿತರೆ ಸಂಬಂಧಿತ ಎಲ್ಲ ಸಂಸ್ಥೆಗಳಿಗೆ ಸರಕಾರ ಪತ್ರ ಬರೆಯಲಿದೆ ಎಂದು ಡಿಸಿಎಂ ತಿಳಿಸಿದರು.
ಸಿಇಟಿ ಬರೆಯಲಿಚ್ಛಿಸುವ ವಿದ್ಯಾರ್ಥಿಗಳು ಜೂ. 15ರಿಂದಲೇ ಆನ್ ಲೈನ್ ಮೂಲಕ ರಿಜಿಸ್ಟ್ರೇಷನ್ ಮಾಡಿಕೊಳ್ಳಬೇಕು ಎಂದು ಅವರು ಮಾಹಿತಿ ನೀಡಿದರು.
ಸಿಇಟಿ ಅಂಕದಿಂದ ಮಾತ್ರ ರ್ಯಾಂಕ್ ತೀರ್ಮಾನ -ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ

