ಮೈಸೂರು: ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ಜೀವಧಾರ ರಕ್ತನಿಧಿ ಕೇಂದ್ರದ ವತಿಯಿಂದ ನಗರದ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವಧಾರ ರಕ್ತನಿಧಿ ಕೇಂದ್ರದಲ್ಲಿ ಹೆಚ್ಚು ಬಾರಿ ರಕ್ತದಾನ ಮಾಡಿದವರನ್ನು ಸೋಮವಾರ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ರಕ್ತದಾನಿಗಳು ಗಿರೀಶ್ 75 ಬಾರಿ, ಮಹಾದೇವ್ 60, ಯೋಗೀಶ್ 55, ಶಿವಕುಮಾರ್ 32, ವಿನಯ್ 30, ಶ್ರೀನಿಧಿವಾದಿರಾಜ್ 30, ಗೀತಾ ಲಲತಾ ನಾಯಕ್ 30, ಬಿ ಎಸ್ ಶ್ರೀನಾಥ್ 30, ಶಿವಕುಮಾರ್ 30 ಬಾರಿ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ಇನ್ನಿತರರಿಗೆ ಮಾದರಿಯಾಗಿದ್ದಾರೆ.
ರಕ್ತದಾನಿಗಳನ್ನು ಸನ್ಮಾನಿಸಿ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ ಮಾತನಾಡಿ, ರಕ್ತದಾನ ಶ್ರೇಷ್ಠದಾನ, ಶಸ್ತ್ರಚಿಕಿತ್ಸೆ ಮತ್ತು ಹೆರಿಗೆಯ ಸಂಧರ್ಭದಲ್ಲಿ ರಕ್ತದ ಅವಶ್ಯಕತೆ ಅನಿವಾರ್ಯ, ಕೋವಿಡ್ ಲಾಕ್ ಡೌನ್ ಕಾರಣದಿಂದಾಗಿ ರಕ್ತನಿಧಿಕೇಂದ್ರಗಳಲ್ಲಿ 30% ಶೇಖರಣೆ ಪ್ರಮಾಣ ಬಂದಿರುವ ಸಮಸ್ಯೆಯನ್ನು ನಿವಾರಿಸಲು ಯುವ ಸಮೂಹ ಹೆಚ್ಚಾಗಿ ರಕ್ತದಾನ ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಚಾಮರಾಜನಗರ ಎಸಿಬಿ ವಿಭಾಗದ ವೃತ್ತ ನಿರೀಕ್ಷಕ ಕಿರಣ್ ರವರು ಮಾತನಾಡಿ, ತುರ್ತು ಸಂದರ್ಭದಲ್ಲಿ ರಕ್ತದ ಶೇಖರಣೆಯನ್ನ ಹೆಚ್ಚಿಸಲು ಮತ್ತು ಯುವಕರಲ್ಲಿ ರಕ್ತದಾನದ ಮನೋಭಾವ ಬೆಳೆಸಲು ರಕ್ತದಾನ ಶಿಬಿರಗಳು ಅವಶ್ಯಕ ಅದರೊಂದಿಗೆ ಸಾರ್ವಜನಿಕರ ಹಿತಕ್ಕಾಗಿ ಅತಿ ಹೆಚ್ಚು ರಕ್ತದಾನ ಸೇವೆಯಲ್ಲಿ ತೊಡಗಿರುವವರನ್ನ ಸರ್ಕಾರ ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಿದರೇ ಇನ್ನಷ್ಟು ಯುವಕರಿಗೆ ಪ್ರೇರಣೆಯಾಗುತ್ತದೆ ಎಂದು ತಿಳಿಸಿದರು.
ಸಂದರ್ಭದಲ್ಲಿ ಮಂಡಿ ಪೆÇಲೀಸ್ ಠಾಣೆ ಆರಕ್ಷಕ ನಿರೀಕ್ಷಕ ಅರುಣ್ ಮಾತನಾಡಿ, ಒಬ್ಬ ಮನುಷ್ಯನ ರಕ್ತವನ್ನು ಇನ್ನೊಬ್ಬನ ಜೀವ ಉಳಿಸಲು ಉಪಯೋಗಿಸಬಹುದು. ಇದರಿಂದಾಗಿ ಹಲವಾರು ಜನರು ಸಾವಿನಿಂದ ಪಾರಾಗಬಹುದಾಗಿದೆ. ಈ ಹಿನ್ನೆಲೆಯಲ್ಲಿ ರಕ್ತದಾನಿಗಳ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಮತ್ತು ಮುತ್ತಣ್ಣ ,ನಗರ ಪಾಲಿಕಾ ಸದಸ್ಯ ನಾಗರಾಜು,
ಪರಿಸರ ಜಾಗೃತಿ ವೇದಿಕೆ ಅಧ್ಯಕ್ಷ ಮಹೇಂದ್ರ ಸಿಂಗ್ ಕಾಳಪ್ಪ, ಆರ್.ಜಿ.ಎಸ್. ಗ್ರೂಪ್ ಅಧ್ಯಕ್ಷ ದೇವೇಂದ್ರ ಪರಿಹಾರಿಯ, ಡಾ॥ ಮಮತಾ, ಭಾರತಿ, ದಿಲೀಪ್ ಹಾಗೂ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

