ಮೈಸೂರು: ಕೋವಿಡ್ ಲಾಕ್ ಡೌನ್ ನಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ಕಲಾವಿದರ ರಕ್ಷಣೆಗೆ ಕನ್ನಡ ಸಂಸ್ಕøತಿ ಇಲಾಖೆ ಕಲಾರಕ್ಷಣೆ ಯೋಜನೆಯನ್ನ ಜಾರಿಗೆ ತರುವಂತೆ ಮೈಸೂರು ಕಲಾವಿದರಿಂದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ರವರಿಗೆ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕ ಚೆನ್ನಪ್ಪ ರವರಿಗೆ ಕರ್ನಾಟಕ ಕಲಾಮಂದಿರ ಆವರಣದಲ್ಲಿ ಬುಧವಾರ ಮನವಿ ಸಲ್ಲಿಸಲಾಯಿತು.
ಇದೇ ಸಂಧರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ನಿರೂಪಕ ಅಜಯ್ ಶಾಸ್ತ್ರಿ ಮಾತನಾಡಿ ಮೈಸೂರಿನಲ್ಲಿ ಎರಡು ಸಾವಿರಕ್ಕೂ ಹೆಚ್ಚಿನ ವೃತ್ತಿಪರ ಕಲಾವಿದರಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿವಿಧ ಕಲಾ ಪ್ರಕಾರಗಳ ಸಾಂಸ್ಕೃತಿಕ ಜನಪದ ನೃತ್ಯ ಪಕ್ಕವಾದ್ಯ ಸುಗಮಸಂಗೀತ ಹಾಡುಗಾರಿಕೆ ಸೇರಿದಂತೆ ಸಾವಿರಾರು ಅರ್ಹ ಬಡಕಲಾವಿದರನ್ನು ಗುರುತಿಸಲು ರಾಜ್ಯ ಸರ್ಕಾರ ಸಮರ್ಪಕ ಕಲಾರಕ್ಷಣೆ ಯೋಜನೆಯನ್ನ ಜಾರಿಗೆ ತರಬೇಕಿದೆ, ಹಾಗಾಗಿ ಮನವಿಯನ್ನ ಸಚಿವರಿಗೆ ಸಲ್ಲಿಸಲಾಯಿತು ಎಂದು ಹೇಳಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ ರಾಜೀವ್, ಮೈಲಾಕ್ ಅಧ್ಯಕ್ಷ ಎನ್.ವಿ ಫಣೀಶ್, ಬಿಜೆಪಿ ವಕ್ತಾರ ಮೋಹನ್, ಕಲಾವಿದ ರಾಘವೇಂದ್ರಪ್ರಸಾದ್, ಗುರುದತ್, ಗಣೇಶ್ ಭಟ್, ವಿಶ್ವನಾಥ್, ಕೃಷ್ಣಮೂರ್ತಿ, ರವಿಶಂಕರ್, ಸೌಭಾಗ್ಯ ಪ್ರಭು, ಅಶ್ವಿನಿ ಶಾಸ್ತ್ರಿ, ರಾಘವೇಂದ್ರ ರತ್ನಾಕರ್, ಪ್ರದೀಪ್ ಕಿಗ್ಗಾಲ್, ಕಂಸಾಳೆ ರವಿ, ಕಿರಣ್, ಹರೀಶ್ ಪಾಂಡವ ಇನ್ನಿತರರು ಇದ್ದರು.

