ಸಿಎಂ ಆಗುವ ಆತುರ ನನಗಿಲ್ಲ -ಡಿ.ಕೆ. ಶಿವಕುಮಾರ್

ಬೆಂಗಳೂರು: ಸಿಎಂ ಆಗುವ ಆತುರದಲ್ಲಿ ನಾನಿಲ್ಲ. ನನ್ನ ಗುರಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದಷ್ಟೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.

ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದಲ್ಲಿ ಬುಧವಾರ ಡಿಕೆಶಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ವಿಧಾನಸೌಧದಲ್ಲಿ ಅಧಿಕಾರ ಹಿಡಿಯಲು ನನ್ನನ್ನು ಚಪ್ಪಡಿ ಕಲ್ಲಿನ ಮೆಟ್ಟಿಲು ಮಾಡಿಕೊಳ್ಳಿ ಅಂತಾ ನಾನೇ ಹೇಳಿದ್ದೇನೆ ಎಂದು ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ಬಿಜೆಪಿ ಸಮಸ್ಯೆಗೂ, ಕಾಂಗ್ರೆಸ್ ವಿಚಾರಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಈಗ ನಮ್ಮಲ್ಲಿ ಯಾವ ಕುರ್ಚಿಯೂ ಖಾಲಿ ಇಲ್ಲ. ಈಗ ನಮ್ಮ ರೇಸ್ ಏನಿದ್ದರೂ ಬಿಜೆಪಿಯನ್ನು ಅಧಿಕಾರದಿಂದ ಇಳಿಸಿ, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದಾಗಿದೆ. ಅದಕ್ಕೆ ನಾವು ಸಮಯ ನೀಡಬೇಕು. ಅದನ್ನು ಬಿಟ್ಟು ಬೇರೆ ವಿಚಾರಕ್ಕೆ ಸಮಯ ನೀಡಿದರೆ ಅದು ವ್ಯರ್ಥವಾಗುತ್ತದೆ ಎಂದರು.

ಬಿಜೆಪಿ ಮಣಿಸಲು ಶ್ರಮಿಸೋಣ

ನಾವೆಲ್ಲರೂ ಬಿಜೆಪಿ ಮಣಿಸಲು ಶ್ರಮಿಸೋಣ. ನಾವೆಲ್ಲ ಕಾರ್ಯಕರ್ತರು. ಜನ ರಾಜ್ಯದಲ್ಲಿ ಬದಲಾವಣೆ ತರಲು ಬಯಸುತ್ತಿದ್ದಾರೆ. ಆ ನಿಟ್ಟಿನಲ್ಲಿ ಕೆಲಸ ಮಾಡೋಣ ಎಂದು ಹೇಳಿದರು.

ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಚುನಾವಣೆಗೆ ಹೋದರೆ ಮಾತ್ರ ಗೆಲುವು ಸಾಧ್ಯ ಎಂದು ಅಖಂಡ ಶ್ರೀನಿವಾಸಮೂರ್ತಿ  ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ, ‘ಹೌದಾ..? ಬಹಳ ಸಂತೋಷ ಎಂದರು.

ಡಿ.ಕೆ. ಶಿವಕುಮಾರ್ ಅವರಿಗೆ ವಯಸ್ಸಿದೆ, ಸಿದ್ದರಾಮಯ್ಯನವರು 2023ಕ್ಕೆ ಸಿಎಂ ಆಗಲಿ, ನಂತರ ಡಿ.ಕೆ. ಶಿವಕುಮಾರ್ ಆಗಲಿ ಎಂಬ ಶಾಸಕ ರಾಮಪ್ಪ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ‘ಸಿಎಂ ಆಗಬೇಕೆಂಬ ಆತುರವಿದೆ ಎಂದು ನಾನು ಯಾವತ್ತಾದರೂ ಹೇಳಿದ್ದೀನಾ..? ನನ್ನ ಗುರಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ಎಂದರು.

ಶಾಸಕರ ಇಂತಹ ಹೇಳಿಕೆಗಳಿಂದ ಗೊಂದಲ ಸೃಷ್ಟಿಯಾಗುವುದಿಲ್ಲವೇ ಎಂಬ ಪ್ರಶ್ನೆಗೆ, ‘ಈ ವಿಚಾರವಾಗಿ ನಮ್ಮ ಪಕ್ಷದ ಹೈಕಮಾಂಡ್ ಏನು ಹೇಳಬೇಕೋ ಅದನ್ನು ಹೇಳಿದೆ. ಶಾಸಕರು ಹೇಳಿಕೆ ನೀಡುತ್ತಿದ್ದಾರೆ ಅಂತಾ ನೀವು ಹೇಳಿದ್ದೀರಿ, ನಾನೂ ಕೆಲವು ನೋಡಿದ್ದೇನೆ. ಶಾಸಕರ ಹೇಳಿಕೆಗಳನ್ನು ಶಾಸಕಾಂಗ ಪಕ್ಷದ ನಾಯಕರು ನೋಡಿಕೊಳ್ಳುತ್ತಾರೆ. ಅವರು ನೋಡಿಕೊಳ್ಳದಿದ್ದರೆ, ಆ ಬಗ್ಗೆ ಗಮನ ಹರಿಸಲು ಕಾಂಗ್ರೆಸ್ ಪಕ್ಷ ಬದುಕಿದೆ ಎಂದು ಅವರು ಹೇಳಿದರು.