ಹೊಟೇಲ್ ಉದ್ಯಮ ಕುರಿತು ಸರಕಾರದ ನಿರ್ಲಕ್ಷ ಬೇಡ -ಹೋಟೆಲ್ ಉದ್ಯಮಿ ಡಾ. ಶ್ವೇತಾ ಮಡಪ್ಪಾಡಿ

ಮೈಸೂರು: ಕೋವಿಡ್ 19ನಿಂದ ಸಂಕಷ್ಟದಲ್ಲಿರುವ ಹೊಟೇಲ್ ಉದ್ಯಮ ಕುರಿತು ಸರಕಾರದ ನಿರ್ಲಕ್ಷ ಬೇಡ ಎಂದು ಹೋಟೆಲ್ ಉದ್ಯಮಿ ಡಾ. ಶ್ವೇತಾ ಮಡಪ್ಪಾಡಿ ತಿಳಿಸಿದ್ದಾರೆ.

ನಗರದಲ್ಲಿ ಮಾಧ್ಯಮ ಗೋಷ್ಠಿ ನಡೆಸಿ ಅವರು ಮಾತನಾಡಿದರು.

ಕೋವಿಡ್-19 ಸಂದರ್ಭದಲ್ಲಿ ಬಹಳಷ್ಟು ಸಂಕಷ್ಟಕ್ಕೆ ಒಳಗಾದ ಉದ್ಯಮವೆಂದರೆ ಅದು ಹೋಟೆಲ್ ಉದ್ಯಮ. ಅದರಲ್ಲೂ ಹೋಟೆಲ್ನಂಥ ಚಾಲೆಂಜಿಂಗ್ ಟಾಸ್ಕ್ಗಳಿಗೆ ಕೈಹಾಕುವುದಕ್ಕೆ ನನ್ನಂಥ ಹೆಣ್ಣುಮಕ್ಕಳು, ಹೊಸ ತಲೆಮಾರಿನ ಯುವ ಜನಾಂಗ ಮುಂದೆಬರಬೇಕಾದರೆ ಪ್ರೋತ್ಸಾಹ ಅತೀ ಮುಖ್ಯ ಎಂದವರು ತಿಳಿಸಿದರು.

ಸರಕಾರದ ಕೆಲಸ ಸಿಗಬಹುದಾದರೂ ಅದರಿಂದ ವಂಚಿತಳಾಗಿ ಹೋಟೆಲ್ ಉದ್ಯಮವನ್ನು ಆಯ್ಕೆ ಮಾಡಿ ಪತಿಯೊಂದಿಗೆ ಆರಂಭಿಸಿ ಯಶಸ್ಸು ಕಂಡವಳು ನಾನು. ನಮ್ಮ ಕೆಫೆ ಆರಂಭವಾದ ಮೇಲೆ ಹಲವು ಸಣ್ಣ-ಸಣ್ಣ ಹೋಟೇಲ್ ಗಳು ಬಹಳ ದೊಡ್ಡ ಪ್ರಮಾಣದಲ್ಲಿ ಮೈಸೂರಿನಲ್ಲಿ ಆರಂಭಗೊಂಡವು ಎಂದರು.

ಆದರೆ ಕೋವಿಡ್ 19 ಹಾಗೂ ಸರಕಾರ ಅದಕ್ಕಾಗಿ ತೆಗೆದುಕೊಂಡ ಲಾಕ್ಡೌನ್ನಂಥ ನಿರ್ಧಾರಗಳು ನೂರಾರು ಹೋಟೆಲ್ಗಳನ್ನು ಇಂದು ಪೂರ್ಣಪ್ರಮಾಣದಲ್ಲಿ ಮುಚ್ಚಿಹಾಕಿವೆ ಎಂದವರು ಹೇಳಿದರು.

ಕೋವಿಡ್ 19ರ ಕಾರಣದಿಂದ ಇತರ ಎಲ್ಲಾ ಉದ್ಯಮಗಳಿಗಿಂತ ಹೆಚ್ಚು ದುಷ್ಪರಿಣಾಮಕ್ಕೊಳಗಾಗಿರುವ ಉದ್ದಿಮೆಯೆಂದರೆ ಅದು ಹೋಟೆಲ್ ಉದ್ಯಮ. ಇದಕ್ಕೆ ಬಹುಮುಖ್ಯ ಕಾರಣ ಸರಕಾರದ ನಿರ್ಲಕ್ಷಿತ ನಿಲುವು. ಸರಕಾರವು ಇಂದು ಯಾವುದೇ ಬಗೆಯ ಕಾಳಜಿಯನ್ನೂ ಹೋಟೆಲ್ ಉದ್ಯಮದ ಕುರಿತು ಹೊಂದಿಲ್ಲ. ಹೋಟೆಲ್ ಕಾರ್ಮಿಕರಿಗಾಗಿ ಸರಕಾರ ಯಾವ ಕ್ರಮವನ್ನು ಕೂಡ ಕೈಗೊಂಡಿಲ್ಲ ಎಂದವರು ದೂರಿದರು.

ಲಾಕ್ಡೌನ್ ಕೊನೆಗೊಳಿಸಿ ಹೋಟೆಲ್ಗಳನ್ನು ಪೂರ್ಣಪ್ರಮಾಣದಲ್ಲಿ ನಡೆಸಲು ತಕ್ಷಣವೇ ಅವಕಾಶ ನೀಡಬೇಕು. ಲಾಕ್ಡೌನ್ ಸಂದರ್ಭದಲ್ಲಿ ಸರಕಾರಕ್ಕೆ ಕಟ್ಟಬೇಕಾದ ತೆರಿಗೆಗಳಲ್ಲಿ ವಿನಾಯಿತಿ ನೀಡಬೇಕು. ಹೋಟೆಲ್ ಕಟ್ಟಡದ ಮೇಲಿನ ತೆರಿಗೆಯಲ್ಲಿ ವಿನಾಯಿತಿ ನೀಡಬೇಕು. ಲಾಕ್ಡೌನ್ ಸಂದರ್ಭದಲ್ಲಿನ ವಿದ್ಯುತ್ ಶುಲ್ಕ ಹಾಗೂ ನೀರಿನ ಶುಲ್ಕದ ಮೇಲೆ ರೀಯಾಯಿತಿ ನೀಡಬೇಕು. ಹೋಟೆಲ್ ಕಾರ್ಮಿಕರಿಗಾಗಿ ಸರಕಾರ ಉಚಿತ ಆರೋಗ್ಯಸೇವೆಗೆ ಅವಕಾಶ ನೀಡಬೇಕು. ಹೋಟೆಲ್ ಕಾರ್ಮಿಕರಿಗಾಗಿ ಉಚಿತ ವಿಮಾ ಯೋಜನೆ ಜಾರಿಗೆ ತರಬೇಕು ಎಂದು ಅವರು ಸರಕಾರವನ್ನು ಆಗ್ರಹಿಸಿದರು.