ಮೈಸೂರು: ಕೊರೊನಾದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಮುಚ್ಚಿಡುತ್ತಿವೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪಿಸಿದರು.
ಮೈಸೂರಿನಲ್ಲಿ ಗುರುವಾರ ಸುದ್ಧಿಗೋಷ್ಠಿ ನಡೆಸಿ ಲಕ್ಷ್ಮಣ್ ಮಾತನಾಡಿದ
ದೇಶಾದ್ಯಂತ ಕೊರೊನಾ ಸೋಂಕಿನಿಂದ 42 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. ಕರ್ನಾಟಕದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಕೊರೊನಾ ಸೋಂಕಿನಿಂದ ಮೃತರಾಗಿದ್ದಾರೆ. ಮೈಸೂರು ಜಿಲ್ಲೆಯಲ್ಲಿಯೇ 7 ಸಾವಿರಕ್ಕೂ ಹೆಚ್ಚು ಮಂದಿ ಕೊರೊನಾದಿಂದ ಸಾವಿಗೀಡಾಗಿದ್ದಾರೆ. ಆದರೂ ಕೇಂದ್ರ ರಾಜ್ಯ ಸರ್ಕಾರಗಳು ಕೊರೊನಾ ಸಾವಿನ ಸಂಖ್ಯೆಯನ್ನು ಮುಚ್ಚಿಟ್ಟಿವೆ ಎಂದವರು ಹೇಳಿದರು.
ಈ ಕೂಡಲೇ ನಿಖರ ವಾಸ್ತವಾಂಶವನ್ನು ಕೇಂದ್ರ ರಾಜ್ಯ ಸರ್ಕಾರಗಳು ತಿಳಿಸಬೇಕು ಎಂದು ಲಕ್ಷ್ಮಣ್ ಒತ್ತಾಯಿಸಿದರು.
ಜಿಲ್ಲಾಧಿಕಾರಿ ಬಗಾದಿ ಗೌತಮ್ ರಿಂದ ಗೊಂದಲದ ಹೇಳಿಕೆ
ಕೊರೊನಾ ವಿಚಾರದಲ್ಲಿ ಮೈಸೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಕೂಡ ಸುಳ್ಳು ಹೇಳುತ್ತಿದ್ದಾರೆಂದು ಹೇಳಿದ ಲಕ್ಷ್ಮಣ್, ಕೊರೊನಾ ಡೆಲ್ಟಾ ಪ್ಲಸ್ ವಿಚಾರದಲ್ಲಿ ಮೈಸೂರು ಜಿಲ್ಲಾಧಿಕಾರಿ ಗೊಂದಲಕಾರಿ ಹೇಳಿಕೆ ನೀಡಿದ್ದಾರೆ. ಆರೋಗ್ಯ ಸಚಿವ ಡಾ ಸುಧಾಕರ್ ಕೊರೊನಾ ಡೆಲ್ಟಾ ಪ್ಲಸ್ ಪ್ರಕರಣವೊಂದು ಮೈಸೂರಿನಲ್ಲಿ ವರದಿಯಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಮೈಸೂರು ಜಿಲ್ಲಾಧಿಕಾರಿಗಳು ಯಾವುದೇ ಡೆಲ್ಟಾ ಪ್ಲಸ್ ಪ್ರಕರಣ ವರದಿಯಾಗಿಲ್ಲ ಎಂದು ಹೇಳಿದ್ದಾರೆ. ಇದೇ ರೀತಿ ಸುಳ್ಳು ಹೇಳುತ್ತಾ ಹೋದರೆ ಮುಂದೆ ಬಗಾದಿ ಗೌತಮ್ ಕೂಡ ಸಿಕ್ಕಿ ಬೀಳಲಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಹೇಳಿದರು.
ಕೊವೀಡ್ ಲಸಿಕೆ ಪಡೆದವರಿಗೆ ನೀಡುತ್ತಿರುವ ಪ್ರಮಾಣ ಪತ್ರದಲ್ಲಿ ಪ್ರಧಾನಿ ಮೋದಿಯವರ ಭಾವಚಿತ್ರ ಹಾಕುತ್ತಿರುವುದಕ್ಕೆ ಲಕ್ಷ್ಮಣ್ ಆಕ್ಷೇಪ ವ್ಯಕ್ತಪಡಿಸಿ, ತೆರಿಗೆಯಿಂದ ಸಂಗ್ರಹವಾದ ಹಣದಿಂದ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಹಾಗಾಗಿ ಲಸಿಕೆ ಪಡೆಯುವ ಪ್ರಮಾಣ ಪತ್ರದಲ್ಲಿ ಪ್ರಧಾನಿ ಭಾವಚಿತ್ರ ಹಾಕುತ್ತಿರುವುದು ಸರಿಯಲ್ಲ ಎಂದರು.

