ಬೆಂಗಳೂರು: ವಿಧಾನಸಭೆಯ ವಿಶೇಷ ಅಧಿವೇಶನ ಕರೆಯುವಂತೆ ಆಗ್ರಹಿಸಿ ರಾಜ್ಯಪಾಲಋು ಹಾಗೂ ಸ್ಪೀಕರ್ ಗೆ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಪತ್ರ ಬರೆದಿದ್ದಾರೆ.
ರಾಜ್ಯದಲ್ಲಿನ ಕೋವಿಡ್ ಸ್ಥಿತಿಗತಿ, ಸರ್ಕಾರದ ಮೇಲಿನ ಭ್ರಷ್ಟಾಚಾರದ ಆರೋಪ, ಆಡಳಿತದಲ್ಲಿ ಅನ್ಯರ ಹಸ್ತಕ್ಷೇಪ, ಕನ್ನಡ, ಕನ್ನಡಿಗ, ಕರ್ನಾಟಕದ ವಿಚಾರದಲ್ಲಿ ಆಗುತ್ತಿರುವ ಹಿನ್ನಡೆ ಕುರಿತು ಚರ್ಚಿಸಲು ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಬೇಕೆಂದು ಹೆಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಕುಮಾರಸ್ವಾಮಿ ಅವರು ಈ ಕುರಿತು ರಾಜ್ಯಪಾಲ ವಜೂಭಾಯಿ ವಾಲಾ ಹಾಗೂ ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪತ್ರವನ್ನು ಬರೆದಿದ್ದಾರೆ.
ಸದ್ಯ ಮೂರನೇ ಅಲೆ ಬಾಗಿಲ ಬಳಿ ಬಂದು ನಿಂತಿದೆ. ಹಿಂದಿನ ವೈಫಲ್ಯಗಳು, ಮುಂದೆ ಆಗಬೇಕಾದ್ದನ್ನು ಸೂಕ್ತ ರೀತಿಯಿಂದ ಚರ್ಚಿಸಿಲು ಸಮರ್ಥವಾಗಿ ಮುಂದಡಿ ಇಡಲು ವಿಶೇಷ ಅಧಿವೇಶನ ಕರೆಯುವ ಅಗತ್ಯವಿದೆ. ಎಲ್ಲರ ಅಭಿಪ್ರಾಯವನ್ನು ಕೇಳಿ ಮುಂದುವರಿಯುವುದು ಪ್ರಜಾಸತ್ತಾತ್ಮಕ ಮಾರ್ಗವೂ ಹೌದು ಎಂದು ಪತ್ರದಲ್ಲಿ ಹೆಚ್ ಡಿಕೆ ಉಲ್ಲೇಖಿಸಿದ್ದಾರೆ.
ರಾಜ್ಯ ಸರ್ಕಾರದ ಮೇಲೆ ಭಾರಿ ಪ್ರಮಾಣದ, ಗಂಭೀರವಾದ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿವೆ. ನೀರಾವರಿ ಇಲಾಖೆ ಯೋಜನೆಯ 20,000 ಕೋಟಿ ರೂ. ಟೆಂಡರ್ನಲ್ಲಿ ಶೇ. 10 ಕಿಕ್ ಬ್ಯಾಕ್ ಪಡೆಯಲಾಗಿದೆ ಎಂದು ಆಡಳಿತ ಪಕ್ಷದ ಹಿರಿಯ ಶಾಸಕರೇ ಆರೋಪಿಸಿದ್ದಾರೆ. ಇದರಲ್ಲಿ ಮುಖ್ಯಮಂತ್ರಿಗಳ ಕುಟುಂಬಸ್ಥರ ಕೈವಾಡವಿದೆ ಎಂದು ಆರೋಪಿಸಲಾಗಿದೆ. ಅಬಕಾರಿ ಇಲಾಖೆಯ ಮಂತ್ರಿ ಪ್ರತಿ ಜಿಲ್ಲೆಯಿಂದಲೂ ಲಂಚದ ಹಣ ಅಪೇಕ್ಷಿಸುತ್ತಿರುವುದು, ಹಣ ಸಂಗ್ರಹ ಮಾಡದೇ ಹೋದರೆ ಅಧಿಕಾರಿಗಳು ಕೆಂಗಣ್ಣಿಗೆ ಗುರಿಯಾಗುವ ಅಪಾಯಗಳಿರುವುದರ ಬಗ್ಗೆ ಧ್ವನಿಮುದ್ರಿಕೆಯೊಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಇದರ ತನಿಖೆಗೆ ಸರ್ಕಾರ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಸಾಂವಿಧಾನಿಕ ಸಂಸ್ಥೆಯ ಮುಖ್ಯಸ್ಥರಾಗಿರುವ ತಾವು ಇದರ ತನಿಖೆಗೆ ಆದೇಶಿಸಬೇಕು ಎಂದು ಹೆಚ್ಡಿಕೆ ಪತ್ರದಲ್ಲಿ ಕೋರಿದ್ದಾರೆ.

