ಚಿಕ್ಕಬಳ್ಳಾಪುರ: ಬೆಂಗಳೂರಿಗೆ ಪರ್ಯಾಯವಾಗಿ ಚಿಕ್ಕಬಳ್ಳಾಪುರವನ್ನು ಬೆಳೆಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಚಿಕ್ಕಬಳ್ಳಾಪುರದಲ್ಲಿ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಸಚಿವರು ಭಾನುವಾರ ಭಾಗವಹಿಸಿ ಮಾತನಾಡಿದರು.
ಕೆಲ ಪ್ರಮುಖ ಕೈಗಾರಿಕೆಗಳನ್ನು ಇಲ್ಲಿಗೆ ತರಲಾಗುತ್ತಿದೆ. ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಿಸುತ್ತಿದ್ದು, ಮುಂದಿನ ವರ್ಷ ಉದ್ಘಾಟನೆಯಾಗಲಿದೆ. ಜಿಲ್ಲೆಯಲ್ಲಿ ಮೂರು ಕಡೆ 28 ಕೋಟಿ ರೂ. ಖರ್ಚು ಮಾಡಿ ಅಂತಾರಾಷ್ಟ್ರೀಯ ದರ್ಜೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ ಎಂದರು.
ಸರ್ವರಿಗೂ ಸಮಬಾಳು ನೀಡಿದ ಕೆಂಪೇಗೌಡರು
ನಾಡಪ್ರಭು ಕೆಂಪೇಗೌಡರು ಜಾತಿ, ಸಮುದಾಯ ನೋಡದೆ ಲೋಕಕಲ್ಯಾಣಕ್ಕಾಗಿ ಕ್ರಮ ಕೈಗೊಂಡರು. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ಉದ್ದೇಶದ ಆಡಳಿತವನ್ನು ಕೆಂಪೇಗೌಡರು ಆರಂಭಿಸಿದರು. ವೈಜ್ಞಾನಿಕವಾಗಿ ಬೆಂಗಳೂರು ನಗರವನ್ನು ನಿರ್ಮಿಸಿ ಬೆಳೆಸಿದರು. ಒಂದೊಂದು ವರ್ಗಕ್ಕೂ ಒಂದೊಂದು ಪೇಟೆಗಳನ್ನು ಕಟ್ಟಿದರು. ಅವರ ಆಶಯಗಳಿಗೆ ತಕ್ಕಂತೆ ಜಾತ್ಯತೀತವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂದರು.
ಮಕ್ಕಳ ದತ್ತು
ಕೋವಿಡ್ ನಿಂದ ಪೋಷಕರನ್ನು ಕಳೆದುಕೊಂಡ ಚಿಕ್ಕಬಳ್ಳಾಪುರ ಜಿಲ್ಲೆಯ 9 ಮಕ್ಕಳನ್ನು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ದತ್ತು ಪಡೆದುಕೊಂಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಸಚಿವರು, ಜಿಲ್ಲಾಡಳಿತಕ್ಕೆ ಈ ಕುರಿತು ಮಾಹಿತಿ ನೀಡಲಾಗಿದೆ. ಈ ಮಕ್ಕಳ ಶೈಕ್ಷಣಿಕ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ಪ್ರತಿ ಮಕ್ಕಳಿಗೆ ತಲಾ 1 ಲಕ್ಷ ರೂ. ನೀಡಲಾಗಿದೆ. ಎಲ್ಲ ಜಿಲ್ಲೆಗಳಲ್ಲಿ ಈ ರೀತಿ ದತ್ತು ಪಡೆಯುವ ಅಗತ್ಯವಿದೆ. ಮುಖ್ಯಮಂತ್ರಿಗಳು ಇದಕ್ಕಾಗಿ ಯೋಜನೆಯನ್ನು ಈಗಾಗಲೇ ಜಾರಿ ಮಾಡಿದ್ದಾರೆ ಎಂದರು.
ಇದೇ ವೇಳೆ ಶ್ರೀ ಸಾಯಿಕೃಷ್ಣ ಚಾರಿಟೇಬಲ್ ಟ್ರಸ್ಟ್ ನಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಚಿವರು 47 ಲ್ಯಾಪ್ ಟಾಪ್ ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು.
ತಪ್ಪಿತಸ್ಥರ ವಿರುದ್ಧ ಕ್ರಮ
ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ಸಾವಿಗೀಡಾದ ಪ್ರಕರಣದ ತನಿಖೆ ನಡೆಯುತ್ತಿದೆ. ತನಿಖಾ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

