ಕೋವಿಡ್ ಸಂತ್ರಸ್ತರಿಗಾಗಿ ಒಂದು ತಿಂಗಳ ಕಾಲ ಜನ ಸಂಪರ್ಕ ಕಾರ್ಯಕ್ರಮ -ಡಿ.ಕೆ. ಶಿವಕುಮಾರ್

ಬೆಂಗಳೂರು: ಕೋವಿಡ್ ಪಿಡುಗಿನಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸಾಂತ್ವನ ಹೇಳಿ, ಸಂಕಷ್ಟಕ್ಕೆ ಸಿಲುಕಿದವರಿಗೆ ಪರಿಹಾರ, ಉದ್ಯೋಗ ಕಳೆದುಕೊಂಡವರು ಹಾಗೂ ಎಲ್ಲ ವರ್ಗದ ಜನರಿಗೆ ಬೆಂಬಲವಾಗಿ ನಿಲ್ಲಲು ಪಕ್ಷ ಒಂದು ತಿಂಗಳ ಕಾಲ ಜನ ಸಂಪರ್ಕ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಶನಿವಾರ ಸಭೆ ನಡೆಸಿದ ಡಿ.ಕೆ. ಶಿವಕುಮಾರ್ ಅವರು ಕಾರ್ಯಕ್ರಮದ ಬಗ್ಗೆ ಪಕ್ಷದ ಹಿರಿಯ ನಾಯಕರು, ಶಾಸಕರು, ಪರಾಜಿತ ಅಭ್ಯರ್ಥಿಗಳು, ಸಂಸದರು ಹಾಗೂ ಜಿಲ್ಲಾಧ್ಯಕ್ಷರಿಗೆ ಕೆಲವು ಸಲಹೆ-ಸೂಚನೆ ನೀಡಿ, ಅವರಿಂದಲೂ ಸಲಹೆ ಪಡೆದರು.

ಸಭೆ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.

ಜು. 1ರಿಂದ ಕೋವಿಡ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರು, ಕಾರ್ಮಿಕರು, ಉದ್ಯೋಗ ಕಳೆದುಕೊಂಡವರು, ಮೃತಪಟ್ಟವರ ಕುಟುಂಬ ಸದಸ್ಯರು, ಕಾರ್ಮಿಕರು, ಚಾಲಕರು ಸೇರಿದಂತೆ ಎಲ್ಲ ವರ್ಗದವರನ್ನು ಭೇಟಿ ಮಾಡುವ ಕಾರ್ಯಕ್ರಮವನ್ನು ಪಕ್ಷ ರೂಪಿಸಿದೆ. ಒಂದು ತಿಂಗಳು ನಡೆಯುವ ಈ ಕಾರ್ಯಕ್ರಮದಲ್ಲಿ ಎಲ್ಲರಿಗೂ ಸಾಂತ್ವನ ಹೇಳಿ, ಧೈರ್ಯ ತುಂಬುವ ಕೆಲಸ ಮಾಡಲಾಗುತ್ತದೆ ಎಂದರು.

ಕೋವಿಡ್ ನಿಂದ3 ಲಕ್ಷಕ್ಕೂ ಹೆಚ್ಚು ಜನ ಸತ್ತಿದ್ದಾರೆ
ಕೋವಿಡ್ ನಿಂದ 30 ಸಾವಿರ ಜನ ಮೃತಪಟ್ಟಿದ್ದಾರೆ ಎಂದು ಸರ್ಕಾರ ಹೇಳುತ್ತಿದೆ. ನಮಗೆ ಬಂದಿರುವ ಮಾಹಿತಿ ಪ್ರಕಾರ 3 ಲಕ್ಷಕ್ಕೂ ಹೆಚ್ಚು ಜನ ಸತ್ತಿದ್ದಾರೆ. ಸಾವಿನ ಪ್ರಮಾಣದ ಬಗ್ಗೆ ಸರ್ಕಾರದ ವೆಬ್ ಸೈಟ್ ನಲ್ಲಿ ಹಾಕಿದ್ದ ಮಾಹಿತಿಯನ್ನು ತೆಗೆದುಹಾಕಲಾಗಿದೆ. ಯಾರು ಕೋವಿಡ್ ನಿಂದ ಸತ್ತಿದ್ದಾರೆ, ಅವರಿಗೆ ಪರಿಹಾರ ಕೊಡಿಸಲು ನಮ್ಮ ಕಾರ್ಯಕರ್ತರು ಅವರ ಮನೆಗೆ ಹೋಗಿ ಅರ್ಜಿ ತುಂಬಿ ಅದನ್ನು ತಹಶೀಲ್ದಾರರು ಹಾಗೂ ಜಿಲ್ಲಾಧಿಕಾರಿಗಳಿಗೆ ನೀಡಲಾಗುವುದು. ಅವರಿಗೆ ನ್ಯಾಯ ಒದಗಿಸಿಕೊಡಬೇಕಾದ ಜವಾಬ್ದಾರಿ ಇದೆ ಎಂದರು.

ಕೇಂದ್ರ ಸರ್ಕಾರ ಘೋಷಿಸಿದ್ದ 20 ಲಕ್ಷ ಕೋಟಿ ರುಪಾಯಿ, ರಾಜ್ಯ ಸರ್ಕಾರ ಘೋಷಿಸಿದ್ದ ಸಾವಿರ ಕೋಟಿ ರುಪಾಯಿ ಪ್ಯಾಕೇಜ್ ಏನಾದವು? ಯಾರಿಗೆ ತಲುಪಿದವು? ಆನ್ಲೈನ್ ಅರ್ಜಿ ಹಾಕಲು ಬಾರದ ಜನರಿಗೆ ನೆರವಾಗಲು ಕಾರ್ಯಕ್ರಮ ರೂಪಿಸಿ ಆ ಬಗ್ಗೆ ನಮ್ಮ ನಾಯಕರ ಜತೆ ಚರ್ಚೆ ನಡೆಸಲಾಯಿತು. ಈ ಸಭೆಯಲ್ಲಿ 315 ನಾಯಕರು ಭಾಗವಹಿಸಿದ್ದರು ಎಂದು ಡಿಕೆಶಿ ಹೇಳಿದರು.

ನಾಳೆ ಚಾಮರಾಜನಗರಕ್ಕೆ ಭೇಟಿ ನೀಡಿ, ಸಾಂಕೇತಿಕವಾಗಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ. ಆಕ್ಸಿಜನ್ ಕೊರತೆಯಿಂದ ಸತ್ತವರ ಮನೆಗೆ ಸರ್ಕಾರದ ಪರವಾಗಿ ಯಾರೂ ಭೇಟಿ ನೀಡಿಲ್ಲ. ಕುಟುಂಬ ಸದಸ್ಯರ ಕಷ್ಟ ಕೇಳಿಲ್ಲ. ನಮ್ಮ ಶಾಸಕರು ಅವರನ್ನು ಭೇಟಿ ಮಾಡಿ ಅವರಿಗೆ 10 ಸಾವಿರ ರುಪಾಯಿ ಪರಿಹಾರ ಕೊಟ್ಟಿದ್ದು, ನಾನು ಅವರನ್ನು ನಾಳೆ ಭೇಟಿ ಮಾಡುತ್ತೇನೆ. ಪಕ್ಷದ ಪದಾಧಿಕಾರಿಗಳ ಬದಲಾವಣೆ ಪ್ರಕ್ರಿಯೆ ಶುರುವಾಗಿದ್ದು, ಅವರಿಗೆ ಈಗ ಜವಾಬ್ದಾರಿ ಕೊಟ್ಟಿದ್ದೇವೆ. ಹೇಗೆ ಕೆಲಸ ಮಾಡುತ್ತಾರೆ ನೋಡೋಣ ಎಂದರು.