ಮೈಸೂರು: ಕೆಲವು ದಿನಗಳಿಂದ ಮೌನವಾಗಿದ್ದ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಮುಖ್ಯಮಂತ್ರಿ ಯಡಿಯೂರಪ್ಪ ಕುಟುಂಬದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ಬೆಳಗ್ಗೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮಾಧ್ಯಮ ಪ್ರತಿನಿಧಿಗಳೂಂದಿಗೆ ಮಾತನಾಡಿದರು.
ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ವಿಜಯೇಂದ್ರ ಎಲ್ಲ ಡೀಲುಗಳನ್ನು ಮುಖ್ಯಮಂತ್ರಿಗಳ ನಿವಾಸ ಕಾವೇರಿ ಹಿಂಭಾಗದ ಗೆಸ್ಟ್‌ಗೌಸ್ʼನಲ್ಲಿ ನಡೆಸುತ್ತಿದ್ದಾರೆ. ಅವರ ಎಲ್ಲ ಡೀಲುಗಳು, ವ್ಯವಹಾರಗಳು ನಡೆಯುತ್ತಿರುವುದೇ ಅಲ್ಲಿ. ಆ ಗೆಸ್ಟ್‌ಹೌಸ್ ಮೇಲೆ ಪೊಲೀಸರು ಯಾಕೆ ದಾಳಿ ಮಾಡುತ್ತಿಲ್ಲ? ಸಿಸಿಬಿ ಪೊಲೀಸರು ಅಲ್ಲೂ ರೇಡ್ ಮಾಡಬೇಕು ಎಂದು ಯತ್ನಾಳ್ ಆಗ್ರಹ ಮಾಡಿದರು.
ಮುಖ್ಯಮಂತ್ರಿ ಏನು ಮಾಡುತ್ತಿದ್ದಾರೆ? ವಿಜಯೇಂದ್ರ ಹೇಗೆ ಡೀಲ್ ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ದಿನಕ್ಕೆ ನೂರು ಕೋಟಿ ರೂಪಾಯಿ ಲೂಟಿ ಹೊಡೆಯುತ್ತಿದ್ದಾರೆ ಎಂದು ಯತ್ನಾಳ್ ನೇರ ಆರೋಪ ಮಾಡಿದರು.
ರಾಜ್ಯವನ್ನು ಲೂಟಿ ಮಾಡುತ್ತಿರುವ ದುಷ್ಟರ ಸಂಹಾರ ಆಗಲೇಬೇಕು. ದುಷ್ಟರ ಸಂಹಾರ ಮಾಡು ಅಂತ ತಾಯಿ ಚಾಮುಂಡೇಶ್ವರಿ ಬಳಿ ಬೇಡಿಕೊಂಡಿದ್ದೇನೆ. ಯಾರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೋ, ಯಾರು ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೋ, ಯಾರು ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೋ ಅವರೆಲ್ಲರೂ ದುಷ್ಟರು. ಅವರೆಲ್ಲರ ಸಂಹಾರ ಆಗಲೇಬೇಕು ಎಂದು ತಾಯಿಯನ್ನು ಬೇಡಿಕೊಂಡಿದ್ದೇನೆ. ಅತಿ ಶೀಘ್ರದಲ್ಲೇ ದುಷ್ಟ ಸಂಹಾರ ಆಗುವ ವಿಶ್ವಾಸವೂ ಇದೆ ಎಂದು ಯತ್ನಾಳ್ ಹೇಳಿದರು.
ಕೆಟ್ಟವರೊಂದಿಗೆ ಒಳ್ಳೆಯವರೂ ಸೇರಿಕೊಂಡಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಬದಲಾವಣೆ ವಿಳಂಬ ಆಗುತ್ತಿದೆ. ಕುರುಕ್ಷೇತ್ರ ಯುದ್ಧದಲ್ಲಿ ಕೌರವರೊಂದಿಗೆ ಭೀಷ್ಮ, ದ್ರೋಣಾಚಾರ್ಯರಂತಹ ಒಳ್ಳೆಯವರೂ ಇದ್ದರು. ಒಮ್ಮೊಮ್ಮೆ ಹೀಗೆಲ್ಲ ಆಗುತ್ತೆ. ಆದರೆ ದುಷ್ಟ ಸಂಹಾರ ಆಗಲೇಬೇಕಲ್ವ ? ಕೆಟ್ಟವರಿಗೆ ಕೊನೆಗಾಲ ಅಂತ ಇದ್ದೇ ಇರುತ್ತೆ. ಅಲ್ಲಿವರೆಗೂ ಕಾಯೋಣ. ಹೈಕಮಾಂಡ್ ಕೂಡ ಮುಖ್ಯಮಂತ್ರಿ ಬದಲಾವಣೆಗೆ ಪರಿಶೀಲನೆ ಮಾಡುತ್ತಿದೆ ಎಂದು ಅವರು ತಿಳಿಸಿದರು.

