ಹಾಸನ: ಯಾರಿಂದಲೂ ದೇವೇಗೌಡರ ಕುಟುಂಬವನ್ನು ಒಡೆಯಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಹೆಚ್. ಡಿ ರೇವಣ್ಣ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಪ್ರಜ್ವಲ್ ರೇವಣ್ಣ ಅವರ ಹೆಸರು ಪ್ರಸ್ತಾಪಿಸಿ ನಮ್ಮ ಕುಟುಂಬ ಒಡೆಯಲು ಮುಂದಾಗಿರುವ ಸಂಸದೆ ಸುಮಲತಾ ವಿರುದ್ಧ ಹೆಚ್. ಡಿ. ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ಪಕ್ಷ ಉಳಿಯುವುದಾದರೆ ಪ್ರಜ್ವಲ್ ರೇವಣ್ಣ ಅವರಿಂದ ಮಾತ್ರ ಎಂಬ ಸುಮಲತಾ ಹೇಳಿಕೆ ವಿರುದ್ಧ ರೇವಣ್ಣ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಕುಟುಂಬ ಹೊಡೆಯುವ ಇಂತಹ ಹೇಳಿಕೆಯನ್ನು ಸಂಸದೆ ಸುಮಲತಾ ಅವರು ನೀಡಬಾರದು. ಅಕ್ರಮ ಗಣಿಗಾರಿಕೆ ಮಾಡಿದ್ದರೆ ತನಿಖೆ ಮಾಡಿ ಕ್ರಮಕೈಗೊಂಡು ಮುಟ್ಟುಗೋಲು ಹಾಕಿಕೊಳ್ಳಲು ಅದನ್ನು ಬಿಟ್ಟು ಕುಟುಂಬ ಒಡೆಯುವ ಕೆಲಸಕ್ಕೆ ಮುಂದಾಗಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಸುಮಲತಾ ಅವರ ಹೇಳಿಕೆ ಸಂಬಂಧ ಪ್ರಜ್ವಲ್ ರೇವಣ್ಣ ನನಗೆ ಫೋನ್ ಮಾಡಿ ನನ್ನ ಹೆಸರು ಏಕೆ ತರುತ್ತಿದ್ದಾರೆ ಈ ಮೂಲಕ ನಮ್ಮ ಕುಟುಂಬವನ್ನು ಒಡೆಯುವ ಪ್ರಯತ್ನ ಎಂದು ಹೇಳಿದ್ದಾರೆ. ದೇವೇಗೌಡರು ಬದುಕಿರುವವರೆಗೂ ಅದು ಸಾಧ್ಯವಿಲ್ಲ ಎಂದು ರೇವಣ್ಣ ಪ್ರತಿಕ್ರಿಯಿಸಿದರು.
ದಿವಂಗತ ನಟ ಅಂಬರೀಶ್ ಬಗ್ಗೆ ಅಪಾರವಾದ ಗೌರವವಿದೆ ಕುಮಾರಸ್ವಾಮಿ ಹಾಗೂ ಅಂಬರೀಶ್ ಅವರೊಂದಿಗಿನ ಸಂಬಂಧ ಹೇಗಿತ್ತು ಎಂದು ನಾನು ಕಂಡಿದ್ದೇನೆ. ಕುಮಾರಸ್ವಾಮಿ ಎಂದಿಗೂ ಸಹ ದ್ವೇಷದ ರಾಜಕಾರಣ ಮಾಡಲ್ಲ. ಬಡವರ ಬಗ್ಗೆ ಕರುಣೆ ಇರುವ ರಾಜಕಾರಣಿ ಎಂದು ತಿಳಿಸಿದ ಅವರು ದೇವೇಗೌಡರ ಕುಟುಂಬ ಯಾರಿಂದಲೂ ಸಂಸ್ಕೃತಿ ಕಲಿಯಬೇಕಾಗಿಲ್ಲ ಎಂದು ತಿರುಗೇಟು ನೀಡಿದರು.
ಪ್ರಜ್ವಲ್ ನನ್ನು ಎತ್ತಿಕಟ್ಟಿ ಕುಟುಂಬವನ್ನು ಹೊಡೆದಾಡಿಸಲು ಯಾರಿಂದಲೂ ಆಗಲ್ಲ. ಜೆಡಿಎಸ್ ಪಕ್ಷ ಉಳಿಸಲು ಕಾರ್ಯಕರ್ತರಿದ್ದಾರೆಂದು ಅವರು ಹೇಳಿದರು.
ಕುಟುಂಬದಿಂದ ಪಕ್ಷ ಉಳಿಯಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ ಅವರು ನಮ್ಮದೇನಾದರೂ ಕ್ರಷರ್ ಇದೆಯಾ? ಕಾಲೇಜುಗಳಿವೆಯಾ? ಕುಮಾರಸ್ವಾಮಿ ದುಡ್ಡು ಹೊಡೆಯುತ್ತಾನೆ ಎನ್ನುತ್ತಾರಲ್ಲ …. ಅದು ನ್ಯಾಯವೇ ಒಬ್ಬ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಹೇಗೆ ನಡೆದುಕೊಂಡರು ರಾಜ್ಯಕ್ಕೆ ತಿಳಿದಿದೆ ಎಂದರು.
ಯಡಿಯೂರಪ್ಪ ಸರ್ಕಾರದ ಅಧಿಕಾರಿಗಳೆ ಕೆ ಆರ್ ಎಸ್ ಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದಾರೆ. ಆದರೆ ಸುಮಲತಾ ಗಣಿಗಾರಿಕೆ ವಿಚಾರ ಪ್ರಸ್ತಾಪಿಸುತ್ತಾ ನಿರ್ಮಾಣ ಮಾಡುತ್ತಿದ್ದಾರೆ ಎಂದು ದೂರಿದರು.
ಲೋಕಸಭಾ ಚುನಾವಣೆ ವೇಳೆ ಸಿಎಂ ಯಡಿಯೂರಪ್ಪ ಸಹಕಾರ ನೀಡಿದ್ದರು ಅಂತೆಯೇ ಇಂದು ಅವರ ಬಳಿ ಕುಳಿತುಕೊಂಡು ಕಲ್ಲು ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳಲು ಸಲಹೆ ನೀಡಲಿ ಎಂದು ರೇವಣ್ಣ ಸವಾಲು ಹಾಕಿದರು.

