ಕೆ ಆರ್ ಎಸ್ ಡ್ಯಾಂ ಬಿರುಕು ಬಿಟ್ಟಿದೆ ಎಂದು ಸುಮಲತಾ ಅವರು ಹೇಳಿರುವುದು ಸರಿಯಲ್ಲ -ಪ್ರತಾಪ್ ಸಿಂಹ

ಮೈಸೂರು: ಕೆ ಆರ್ ಎಸ್ ಡ್ಯಾಂ ಬಿರುಕು ಬಿಟ್ಟಿಲ್ಲ ಎಂದು ಅಧಿಕಾರಿಗಳೇ ತಿಳಿಸಿದ್ದಾರೆ. ಅಂಥಹದರಲ್ಲಿ ಡ್ಯಾಂ ಬಿರುಕು ಬಿಟ್ಟಿದೆ ಎಂದು ಸಂಸದೆ ಸುಮಲತಾ ಅವರು ಹೇಳಿರುವುದು ಸರಿಯಲ್ಲವೆಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ನಗರದಲ್ಲಿ ಗುರುವಾರ ಸಂಸದ ಪ್ರತಾಪ್ ಸಿಂಹ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಕೆ ಆರ್ ಎಸ್ ಡ್ಯಾಂನಲ್ಲಿ ಬಿರುಕು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿ, ಕೆ ಆರ್ ಎಸ್ ಡ್ಯಾಂ ಬಿರುಕು ಬಿಟ್ಟಿಲ್ಲ ಎಂದು ಅಧಿಕಾರಿಗಳೇ ತಿಳಿಸಿದ್ದಾರೆ. ಅಂಥಹದರಲ್ಲಿ ಡ್ಯಾಂ ಬಿರುಕು ಬಿಟ್ಟಿದೆ ಅನ್ನೋದು ಸರಿಯಲ್ಲ
ಎಂದು ಸಂಸದೆ ಸುಮಲತಾಗೆ ಟಾಂಗ್ ನೀಡಿದರು.

ಕೆ ಆರ್ ಎಸ್ ಅಧಿಕಾರಿಗಳ ಜೊತೆ ನಾನು ಮಾತನಾಡಿದ್ದೇನೆ. ಅಲ್ಲಿ ಯಾವುದು ಸಮಸ್ಯೆ ಇಲ್ಲ ಅಲ್ಲಿಯ ಅಧಿಕಾರಿಗಳೇ ನನಗೆ ಮಾಹಿತಿ ನೀಡಿದ್ದಾರೆಂದರು.

ಅಕ್ರಮ ಗಣಿಗಾರಿಕೆ ಸ್ಥಳಗಳಲ್ಲಿ ಸಂಸದೆ ಸುಮಲತಾರಿಗೆ ಅಡ್ಡಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಅವರ ಹೇಳಿಕೆಯನ್ನೇ ಮಾಧ್ಯಮದವರು ಸತ್ಯ ಎಂದು ಭಾವಿಸಬೇಡಿ. ಸತ್ಯದ ಆಳಕ್ಕೆ ಹೋಗಿ ತಿಳಿದುಕೊಳ್ಳುವ ಮನಸ್ಥಿತಿ ಮಾಧ್ಯಮದವರಿಗೆ ಇರಬೇಕಾಗುತ್ತದೆ. ರಾಜಕೀಯವಾಗಿ ಯಾರೇ ಏನ್ ಬೇಕಾದರೂ ಹೇಳಿಕೆ ಕೊಡಬಹುದು. ಯಾರು ಕೂಡ ಎಲ್ಲಿಯೂ ಅಡ್ಡಿ ಪಡಿಸಿಲ್ಲ. ಇದೊಂದು ರಾಜಕೀಯ ಎಂದು ಹೇಳಿದರು.

ಈ ಹಿಂದೆಯೂ ಕೂಡ ಮೈಸೂರು-ಬೆಂಗಳೂರು ದಶಪಥ ರಸ್ತೆ ಮಾಡುವುದಕ್ಕೂ ಸುಮಲತಾ ಅವರು ಬಿಡಲಿಲ್ಲ. ಸುಳ್ಳು ನೆಪ ಹೇಳಿ ಅಡ್ಡಿಪಡಿಸಿದರು ಎಂದು ಸಂಸದ ಪ್ರತಾಪ್ ಸಿಂಹ ಆರೋಪಿಸಿದರು.