ಮೈಸೂರು: ಮುಂದಿನ ಚುನಾವಣೆಯಲ್ಲಿ ವಿರೋಧ ಪಕ್ಷದ ಸ್ಥಾನಕ್ಕೂ ಕಾಂಗ್ರೆಸ್ ಬರುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಮುಂದಿನ ಚುನಾವಣೆಯಲ್ಲಿ ವಿರೋಧ ಪಕ್ಷದ ಸ್ಥಾನಕ್ಕೂ ಕಾಂಗ್ರೆಸ್ ಬರುವುದಿಲ್ಲ. ಮುಖ್ಯಮಂತ್ರಿ ಪದವಿ ಎನ್ನುವುದು ಕನಸು ಎಂದರು.
ಇನ್ನೂ ಚುನಾವಣೆಯೇ ನಡೆದಿಲ್ಲ, ಈಗಾಗಲೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಿಕೊಂಡಿದ್ದಾರೆ.
ಐದು ಜಾತಿಗೆ ಒಬ್ಬೊಬ್ಬ ಮುಖ್ಯಮಂತ್ರಿ. ಅವರು ಸ್ವಯಂಘೋಷಿತ ಮುಖ್ಯಮಂತ್ರಿಗಳು. ಚುನಾವಣೆ ನಂತರ ಅವರನ್ನು ಹುಡುಕಬೇಕಾಗುತ್ತದೆ ಎಂದು ಈಶ್ವರಪ್ಪ ಟೀಕಿಸಿದರು.
17 ಜನರನ್ನು ಯಾವುದೇ ಕಾರಣಕ್ಕೂ ವಾಪಸ್ ಕರೆದುಕೊಳ್ಳುವುದಿಲ್ಲ ಅಂತಾ ಸಿದ್ದರಾಮಯ್ಯ ಹೇಳುತ್ತಾರೆ. ಅರ್ಜಿ ಹಾಕಿ ಪಕ್ಷಕ್ಕೆ ಬಂದರೆ ಸೇರಿಸಿಕೊಳ್ಳುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳುತ್ತಿದ್ದಾರೆ. ಇಂತಹ ಗೊಂದಲ ಕಾಂಗ್ರಸ್ ನಲ್ಲಿದೆ. ಕಾಂಗ್ರೆಸ್ನಲ್ಲಿ ಏಕತೆ ಇಲ್ಲ ಎಂದರು.
ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು. ಮತ್ತೆ ಕಾಂಗ್ರೆಸ್ ಗೆ 17 ಮಂದಿ ಆ ಕಡೆ ತಿರುಗಿಯೂ ನೋಡುವುದಿಲ್ಲ. ಯಾರಾದರೂ ಮತ್ತೆ ಆ ಪಕ್ಷಕ್ಕೆ ಹೊಗ್ತಾರ? ಎಂದು ಪ್ರಶ್ನಿಸಿದರು.
ಬಿಜೆಪಿಯಲ್ಲಿ ಸಿಎಂ ಬದಲಾವಣೆ ಮಾತು ಸಂಬಂಧ ಪ್ರತಿಕ್ರಿಯಿಸಿ, ಸಿಎಂ ಬಗ್ಗೆ ಮೂರ್ನಾಲ್ಕು ಮಂದಿ ಮಾತ್ರ ಮಾತನಾಡುತ್ತಿದ್ದಾರೆ. ಅದನ್ನು ಬಿಟ್ಟು ಬೇರೆ ಯಾರು ಮಾತನಾಡುತ್ತಿಲ್ಲ. ಅವರಿಗೆ ಯಾವಾಗ ಬುದ್ದಿಕಲಿಸಬೇಕು ಎಂಬುದು ಗೊತ್ತಿದೆ ಎಂದರು.

